Thursday, 9 July 2015

‘ಸ್ವಂತಿ’ಯ ನಡುವೆ ಮಾಸದಿರಲಿ ಸ್ವಂತಿಕೆಯ ಬಿಂಬ


courtesy; google


 ‘ನಮ್ಮ ಜಾತಿಯಲ್ಲಿ ಹೆಣ್ಣಿಗೆ 18 ವರ್ಷ ಆಯ್ತೆಂದರೆ, ಮದುವೆ ಮಾಡಿಬಿಡ್ತೀವಿ. ಆಮೇಲೆ ಗಂಡ ಓದಿಸಿದ್ರೆ, ಓದುತ್ತಾಳೆ, ಇಲ್ಲಾಂದರೆ, ಮನೆಯಲ್ಲಿ ಕೆಲಸ ಮಾಡಿಕೊಂಡು ಇರ್ತಾಳೆ. ಮನೆಯ ಮೂರು ಹೆಣ್ಣು ಮಕ್ಕಳಿಗೂ 18 ವರ್ಷ ತುಂಬೊ ಮುಂಚೆ ಮದುವೆ ಮಾಡಿದ್ದೀವಿ’ ಹೀಗೆ ಎದುರು ಮನೆ ಆಂಟಿಯ ಪ್ರಲಾಪ. ಹದಿನೆಂಟರ ನಂತರ ಹೆಣ್ಣಮಕ್ಕಳು ಮನೆಯಲ್ಲಿದ್ದರೆ ಅಪರಾಧ; ಅದು ಈ ಕಾಲದಲ್ಲಿ!
   ತರಕಾರಿಗೆ ಅಂತ ಪ್ರಾವಿಷನ್ ಸ್ಟೋರ್ ಕಡೆ ಹೋಗಿದ್ದೆ. ಲೋಕಾಭಿರಾಮವಾಗಿ ಹರಟುತ್ತಿದ್ದ ಪ್ರಾವಿಷನ್ ಸ್ಟೋರ್ ಆಂಟಿಯ ಮಾತು ಎಂಜಿನಿಯರಿಂಗ್ ಕೊನೆಯ ವರ್ಷ ಓದುತ್ತಿರುವ ತಮ್ಮ ಮಗಳ ಕಡೆ ಹೊರಳಿತು. ‘ಅವರಪ್ಪ ಮಿಲಿಟರಿಯಲ್ಲಿದ್ದವರು, ಕೆಲಸಕ್ಕೆ ಕಳುಹಿಸಲ್ಲ, ಎಂಜಿನಿಯರಿಂಗ್ ಮುಗಿದ ಕೂಡಲೇ, ಗಂಡು ನೋಡಿ ಮದುವೆ ಮಾಡ್ತೀವಿ. ಗಂಡನಿಗೆ ಇಷ್ಟ ಇದ್ದರೆ, ಕೆಲಸಕ್ಕೆ ಹೋಗ್ತಾಳೆ. ಹೆಣ್ಣು ಮಕ್ಕಳಿಗೆ ಓದಿಸಬೇಕು. ಇಲ್ಲ ಅಂದರೆ ಒಳ್ಳೆ ನೌಕರಿಯಲ್ಲಿರುವ ವರ ಸಿಗಲ್ಲ!’... ಹೀಗೆ ಆಂಟಿ ಹೇಳ್ತಾ ಹೋದ್ರು.. ಯಾವ ತರಕಾರಿ ತಗೊಬೇಕು ಅನ್ನೊ ಗೊಂದಲ ಶುರುವಾಗಿ ಬರಿಗೈಲಿ ಹಾಗೇ ವಾಪಸ್ಸಾದೆ.
     ನಿನ್ನ ಹುಡುಗಿ ಹೇಗಿರಬೇಕು? ಅಂತಾ ಕೇಳ್ತಿದ್ದೆ ತುಂಬಾ ಓದಿಕೊಂಡ ಗೆಳೆಯನೊಬ್ಬನಿಗೆ. ಅವನ ಉತ್ತರ ಹೀಗಿತ್ತು ‘ನನ್ನ ಬೇಕು-–ಬೇಡಗಳನ್ನೆಲ್ಲ ಅರ್ಥ ಮಾಡಿಕೊಂಡು, ಅಚ್ಚುಕಟ್ಟಾಗಿ ಅಡುಗೆ ಮಾಡಿಕೊಂಡು, ಮನೆಯಲ್ಲಿಯೇ ಇರುವ ಹೆಂಡತಿಯಾದರೆ ಸಾಕು’!
    ಕಳೆದ ವಾರವಷ್ಟೆ ಸಾಮಾಜಿಕ ಜಾಲತಾಣದಲ್ಲಿನ ಜಾಣರೆಲ್ಲರೂ ‘ಸೆಲ್ಫಿ ವಿತ್ ಡಾಟರ್’ ಅಭಿಯಾನದ ಭಾಗವಾಗಿದ್ದನ್ನು ಗಮನಿಸಿದೆ.  ಗೌರವದ, ಮಮತೆಯ ಭಂಗಿಗಳಲ್ಲಿ ಅಪ್ಪಂದಿರು, ಅಮ್ಮಂದಿರು ತಮ್ಮ ಮಗಳೊಂದಿಗೆ ತೆಗೆಸಿಕೊಂಡ ಪೋಟೋಗಳನ್ನು ನೋಡೋಕೇ ಅದೆಷ್ಟು ಚಂದ!. ಎಲ್ಲ ದಿನಾಚರಣೆಗಳಂತೆ ಇದು ಒಂದು ದಿನದ ಸಂಭ್ರಮ. ಎಲ್ಲ ಸವಾಲಿನ ಅಲೆಗಳ ನಡುವೆಯೂ ಇರುವ ನೀರ ಮೇಲಿನ ಗುಳ್ಳೆ.
   ಪ್ರಚಾರದ ತಂತ್ರವಿಲ್ಲದೇ ಯಾವುದೇ  ವಿಷಯ ಜನರನ್ನು ಸರಾಗವಾಗಿ ಮುಟ್ಟದು ಎಂಬುದು ನಿಜ. ಆದರೆ, ಕೇವಲ ಪ್ರಚಾರದ ಗಿಮಿಕ್‌ಗಳಿಗೆ ಹೆಣ್ಣಿನ ಕುರಿತ ಕಾಳಜಿ ಸೀಮಿತವಾಗಬಾರದು ಎಂಬುದು ನನ್ನಂತಹ ಸಾಮಾನ್ಯಳ ಅಪೇಕ್ಷೆ.ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕೈಪಿಡಿ ಮೇಲೆ ಕಣ್ಣಾಡಿಸಿದರೆ, ಹೆಣ್ಣು ಮಕ್ಕಳ ಹಕ್ಕು ಹಾಗೂ ಕರ್ತವ್ಯ, ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಉಪಯೋಗವಿಲ್ಲದ ಆಕರ್ಷಣೀಯ ಘೋಷಣೆಗಳು ಸಿಗುತ್ತವೆ. ಆದರೆ ಈ ಬಾರಿ ಖುದ್ದು ಪ್ರಧಾನಿ ‘ಸೆಲ್ಫಿ ವಿತ್ ಡಾಟರ್’ಗೆ ಕರೆ ನೀಡಿರುವುದು ಎಲ್ಲರ ಸಂಭ್ರಮಕ್ಕೆ ಕಾರಣ.
    ಇರಲಿ, ಸೆಲ್ಫಿ ವಿತ್ ಡಾಟರ್’ ನ ಹಿಂದೆ ಘನ ಉದ್ದೇಶ ಅಡಗಿರುವುದರಿಂದ, ವಿಷಯ ಭೂಮಿಕೆಯನ್ನು ಕೇವಲ ಛಾಯಾಚಿತ್ರದ ಸಂಭ್ರಮಕ್ಕೆ ಸೀಮಿತಗೊಳಿಸಿ ಬಿಡಲು ಸಾಧ್ಯವಿಲ್ಲ. ನಮ್ಮ ಮನೆಯ ಮಗಳು, ನಮ್ಮ ಹೆಮ್ಮೆಯಾಗಿದ್ದಾಳೆಯೇ? ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಹೊತ್ತಿದು. ಬೌದ್ಧಿಕ ಹಾಗೂ ಮಾನಸಿಕ ಪ್ರಬುದ್ಧತೆಯನ್ನು ಸಮಾ–ಸಮಾನಾಗಿ ಸಾಧಿಸಿರುವ ಗಂಡು ಹೆಣ್ಣಿನ ನಡುವೆ  ಹೆಚ್ಚು ಕಡಿಮೆಯ ಅಂತರವನ್ನು ತೊಡೆದು ಹಾಕಲು ಆಗಿದೆಯೇ? ಎಂದು ಚಿಂತಿಸಲು ಸಕಾಲ.
   ಮದುವೆಯಾಗುವುದು, ಮತ್ತೊಬ್ಬರ ಬಾಳ ಸಂಗಾತಿಯಾಗುವುದು ಗಂಡಿನಂತೆ, ಹೆಣ್ಣಿನ ಬದುಕಿನಲ್ಲಿಯೂ ಪ್ರಮುಖ ಘಟ್ಟ. ಹಾಗೆಂದ ಮಾತ್ರಕ್ಕೆ ಹೆಣ್ಣಿನ ವ್ಯಕ್ತಿತ್ವ ಇವುಗಳ ಕಾರಣಕ್ಕಾಗಿ ಕಳೆದುಹೋಗಿ ಬಿಡಬೇಕೆ?. ಮಗಳು, ಹೆಂಡತಿ, ತಾಯಿ ಈ ಮೂರು ಸಂಬಂಧಗಳಲ್ಲಿಯೂ ತನ್ನನ್ನು ತಾನು ಕಂಡುಕೊಳ್ಳುತ್ತಾ, ಸಾಮಾಜಿಕ ಜವಾಬ್ದಾರಿಯನ್ನು ನಿಭಾಯಿಸುತ್ತಲೇ, ತನಗಿರುವ ಪ್ರತಿಭೆಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲವೇ?
      ಹೆಣ್ಣಿಗೆ ಶಿಕ್ಷಣ ಸ್ವಾತಂತ್ರ್ಯ ನೀಡುವುದರ ಹಿಂದೆ ಅವಳ ಪಥವನ್ನು ಅವಳೇ ಕಂಡುಕೊಳ್ಳುವ, ಸ್ವಾವಲಂಬನೆ ಹಾದಿಯ ಸೊಡರು ತಾಕಿ, ಅವಳ ಒಳಬೆಳಗನ್ನು ಹೆಚ್ಚು ಮಾಡುವ ಘನ ಉದ್ದೇಶವಿತ್ತು. ಈ ಉದ್ದೇಶ ಈಡೇರಿದೆಯೇ? ಲಿಂಗತಾರತಮ್ಯಕ್ಕೆ ವಿದ್ಯೆ ಪ್ರಮುಖ ಅಸ್ತ್ರ ಎಂದೇ ಭಾವಿಸಲಾಗಿತ್ತು. ಆದರೆ ಆರಂಭದಲ್ಲಿ ನೀಡಿದ್ದ ಮೇಲಿನ ಮೂರು ದೃಷ್ಟಾಂತಗಳು ಆತ್ಮ ಸ್ವಾತಂತ್ರ್ಯ ಹೆಣ್ಣಿಗೆ ಇಂದಿಗೂ ಮರೀಚಿಕೆಯೇ? ಎಂಬ ಪ್ರಶ್ನೆಯನ್ನು ತಂದೊಡ್ಡುತ್ತದೆ.
   ಹೆಣ್ಣಿಗೆ ರಾಜಕೀಯ ಸ್ವಾತಂತ್ರ್ಯವೆಂಬುದು ಮಾಯಾಜಿಂಕೆಯಾಗಿರುವಾಗ,  ಶಿಕ್ಷಣ ಕೇವಲ ಯೋಗ್ಯ ವರನೊಂದಿಗೆ ಜೋಡಿಯಾಗಲು ಇರುವ ಮಾನದಂಡವೇ?.   ಹೆಣ್ಣಿನ ಪ್ರತಿಭೆ ಕೇವಲ ಕುಟುಂಬಕ್ಕೆ ಸೀಮಿತವಾಗಿಬಿಡಬೇಕು ಎಂಬುದು ಅಪ್ಪಟ ಜಿಡ್ಡಿನ ಮನಸ್ಥಿತಿ. ಇದಕ್ಕೆ ಔಷಧ ಎಲ್ಲಿದೆ?
   ದೇಶದ ಜನಸಂಖ್ಯೆಯಲ್ಲಿ ಅರ್ಧದಷ್ಟು ಮಹಿಳೆಯರೇ ಇದ್ದಾರೆ. ಅವರ ಸಾಮರ್ಥ್ಯಕ್ಕೆ ಅನುಸಾರವಾಗಿ ಉದ್ಯೋಗ ವಲಯವೊಂದನ್ನು ಸೃಷ್ಟಿಸಲು ಸಾಧ್ಯವಿಲ್ಲವೇ?. ಸಾಮಾಜಿಕ ಹಾಗೂ ಕೌಟುಂಬಿಕ ಜವಾಬ್ದಾರಿಯ ನಡುವೆಯೂ ಈ ನೆಲದ ಅಭಿವೃದ್ಧಿಗೆ ತುಡಿಯುವ ಹೆಣ್ಣಿಗೆ ಅವಕಾಶ ಲೋಕವನ್ನು ಸೃಷ್ಟಿ ಮಾಡಬೇಕು.
    ಕೌಟುಂಬಿಕ ಬದುಕಿನಿಂದಾಗಿ ಹೆಣ್ಣು ವೃತ್ತಿ ಬದುಕನ್ನು ಸಮರ್ಪಕವಾಗಿ ನಿಭಾಯಿಸಲು ಸಾಧ್ಯವಿಲ್ಲ ಎಂದು ಸುಖಾಸುಮ್ಮನೆ ಆರೋಪಗಳನ್ನು ಹೊರಿಸಿಬಿಡಲಾಗುತ್ತದೆ. ಹೆಣ್ಣಿನ  ಸ್ವಾವಲಂಬಿತ ವ್ಯಕ್ತಿತ್ವವನ್ನು ಗುರುತಿಸುವ ಸೂಕ್ಷ್ಮ ಮನಸ್ಥಿತಿಯನ್ನು ಸದ್ಯ ಬೆಳೆಸಬೇಕಿದೆ. ಈ ಸೂಕ್ಷ್ಮತೆ ಶಿಕ್ಷಣದಿಂದ ದೊರೆಯತ್ತದೆ ಎಂಬ ಭರವಸೆ ಹುಸಿಯಾಗಿದೆ.
    ಸೆಲ್ಫಿಗೆ ನಿಲುಕದ ಎದೆಯಲ್ಲಿ ಹೆಣ್ಣು ಗಂಡಿನ ಅಸಮಾನತೆಯನ್ನು ಹೇಗೆ ಹೋಗಲಾಡಿಸುತ್ತೀರಿ? ಹಾಗೆಯೇ ಸೆಲ್ಫಿ ಕರೆಗೆ ಓಗೊಟ್ಟವರೆಲ್ಲರೂ ‘ಅವಲಂಬನೆಯ’ ಚೌಕಟ್ಟಿನಿಂದಾಚೆಗೆ ಹೆಣ್ಣಿನ ವ್ಯಕ್ತಿತ್ವವನ್ನು ಕಾಣಬಲ್ಲರೇ?. ಯಾತನಾಮಯ ಬದುಕು ಸವೆಸುತ್ತಿರುವ ವೇಶ್ಯೆಯರಲ್ಲಿ ಹೆಣ್ಣಾಗಿ ಹುಟ್ಟಿದ್ದಕ್ಕೆ ಯಾವ ಹೆಮ್ಮೆಯನ್ನು ಬಿತ್ತುತ್ತೀರಿ?, ನಿತ್ಯ ತಿಪ್ಪೆ ಸೇರುತ್ತಿರುವ  ಹೆಣ್ಣು ಭ್ರೂಣಗಳ ಕಣ್ಣುಗಳಲ್ಲಿ ಅಸ್ಮಿತೆಯ ಬೆಳಕನ್ನು ಹೊತ್ತಿಸುವುದಾದರೂ ಹೇಗೆ? ಅತ್ಯಾಚಾರಕ್ಕೆ ಒಳಗಾದ ಹೆಣ್ಣಲ್ಲಿ ಯಾವ ಬಗೆಯ ಆತ್ಮಸೈರ್ಯ ಮೂಡಿಸಬಲ್ಲಿರಿ?
     ರಾಜಕೀಯದಲ್ಲಿ ಮಹಿಳಾ ಮೀಸಲಾತಿಯ ಕಾಯ್ದೆಯ ಅನುಷ್ಠಾನ ಕುಂಟುತ್ತಾ ಸಾಗಿದೆ. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಅಧ್ಯಕ್ಷೆ ಸ್ಥಾನದಲ್ಲಿರುವ ಹೆಂಡತಿಯ ಕುರ್ಚಿಯಲ್ಲಿ ಗಂಡ ಕೂತು, ಅಧಿಕಾರ ಚಲಾಯಿಸುತ್ತಿದ್ದಾನೆ. ಈ ಬೀದಿಯ ಅತ್ಯಾಚಾರಿ, ಮುಂದಿನ ಬೀದಿಯಲ್ಲಿ ಮದುಮಗನಾಗಿ ಕಂಗೊಳಿಸುತ್ತಿದ್ದಾನೆ. ಆ ಮಟ್ಟಿಗೆ ಕಾನೂನುಗಳು ಸಡಿಲವಾಗಿವೆ.
   ಮನೆಯ ಮಗಳಿಗೆ ಉನ್ನತ ವಿದ್ಯಾಭ್ಯಾಸ ನೀಡಲು ದಾಪುಗಾಲು ಇಡುತ್ತಿದ್ದೇವೆ. ಆದರೆ ಅವಳಿಗೊಂದು ಸ್ವಂತ ವ್ಯಕ್ತಿತ್ವವಿದೆ ಎಂಬುದನ್ನೇ ಮರೆತಿದ್ದೇವೆ. ಸಾರ್ವಜನಿಕವಾಗಿ ಹೆಣ್ಣಿನ ಹಕ್ಕು, ಸ್ವಾತಂತ್ರ್ಯದ ಬಗ್ಗೆ ದನಿ ಏರಿಸುತ್ತಿದ್ದೇವೆ. ಆದರೆ, ಆಂತರ್ಯದಲ್ಲಿ ಅವಳೆಡೆಗೆ ತಾತ್ಸಾರ, ಅಸಮಾಧಾನವನ್ನು ಹುಟ್ಟಿಸಿಕೊಂಡಿದ್ದೇವೆ. ನಡೆಯುತ್ತಿರುವ ಎಲ್ಲಾ ಅನಾಚಾರಕ್ಕೂ ಹೆಣ್ಣು ಹೊರಗೆ ಕಾಲಿಟ್ಟಿದೆ ಕಾರಣ ಎಂದು ಆರೋಪಿಸಿ ತಣ್ಣಗಿದ್ದೇವೆ.
    ಹೆಣ್ಣಿಗಿರುವ ಸ್ವಂತ ವ್ಯಕ್ತಿತ್ವದ ಬಿಂಬಕ್ಕೆ ಈ ‘ಸ್ವಂತಿ’ ಪ್ರತಿಮೆಯಾಗಬೇಕು. ಇಲ್ಲವಾದರೆ,  ನಾಲ್ಕು ಗೋಡೆಗಳ ನಡುವೆ ಆರೋಪಿಸಲ್ಪಟ್ಟ ಅವಳ ವ್ಯಕ್ತಿತ್ವ, ಮುಷ್ಟಿ ಗಾತ್ರದ ಮೊಬೈಲ್‌ನಲ್ಲಿ ಬಂಧಿಯಾಗಿ ಬಿಡುವ ಸಾಧ್ಯತೆಯೇ ಹೆಚ್ಚು.

1 comment:

  1. ಎಷ್ಟೇ ಮುಂದುವರೆದಿದ್ದೀವಿ ಎಂದುಕೊಂಡರೂ ಹೆಣ್ಣುಮಕ್ಕಳ ಕುರಿತ ಧೋರಣೆ ಮಾತ್ರ ಹಾಘೇ ಇದೆ;18 ಆಗುತ್ತಿದ್ದಂತೆಯೇ ಮದುವೆ ಮಾಡುವ ಅವಸರಕ್ಕೆ ಬೀಳುವ ನಮ್ಮ ತಾಯಂದಿರ ಮನಸ್ಥಿತಿ ಬದಲಾಗಬೇಕು; ಮದುವೆಯೇ ಅಂತಿಮವಲ್ಲ, ಅದೂ ಅದುಕಿನ ಒಂದು ಭಾಗವಷ್ಟೆ ಎನ್ನುವ ಪ್ರಜ್ಞೆ ಬೆಳೆಸಿಕೊಳ್ಳಬೇಕು - ಶ್ವೇತಾ

    ReplyDelete