Wednesday, 24 September 2014

ಸಹಜ ಸ್ಪಂದನೆಯ, ಆರ್ದ್ರ ಭಾವದ ಅಂಕಣ ಬರಹ


    





ಅಂಕಣ ಬರಹಗಳೆಂದರೆ ಆಯಾ ಕಾಲದ ವಿದ್ಯಮಾನದ ಧಾತು ಹಾಗೂ ಅಂಕಣಕಾರನ ದೃಷ್ಟಿಕೋನಗಳೆರಡು ಪರಸ್ಪರ ಸಂವಾದಕ್ಕೆ ಒಳಪಟ್ಟುಕೆಲವೊಮ್ಮೆ ಮಿಳಿತಗೊಂಡು ಓದುಗನ ವಿವೇಕಸ್ತರ ಹಾಗೇ ಜ್ಞಾನದ ಮಿತಿಯನ್ನು ವಿಸ್ತಾರಗೊಳಿಸುವುದೇ ಆಗಿದೆ. ವರ್ತಮಾನವನ್ನು ಕಟ್ಟಿಕೊಡುತ್ತಲೇ ಇತಿಹಾಸದ ಪುಟಗಳಲ್ಲಿ ಸೇರಿಸಬಹುದಾದ ಹಲವು ವಾಗ್ವಾದಗಳನ್ನುಚರ್ಚೆಗಳನ್ನು ಕೂಡ ಅಂಕಣಕಾರ ತನಗರಿವಿಲ್ಲದಂತೇ ನೀಡುತ್ತಾ ಹೋಗುತ್ತಾನೆ. ಹಾಗೇ ನೀಡುವುದರಲ್ಲಿಯೇ ಅಂಕಣಕಾರನ ಸಶಕ್ತತೆಕಸಬುದಾರಿಕೆ ಕೂಡ ಅಡಗಿದೆ.
    ಎಲ್ಲಾ ಕಡೆಗಳಿಂದಲೂ ಬರುವ ಜ್ಞಾನವನ್ನು ಸ್ವೀಕರಿಸು ಎನ್ನುತ್ತದೆ ಉಪನಿಷತ್. ಅದನ್ನೇ ಗಾಂಧಿ ತಮ್ಮ ಜೀವಿತಾವಧಿಯಲ್ಲಿ ಪ್ರಚುರಪಡಿಸಿದ್ದರು. ಸೈದ್ದಾಂತಿಕ ಭಿನ್ನಾಭಿಪ್ರಾಯಗಳ ನಡುವೆಯೂ ಕೇವಲ ತಾತ್ವಿಕವನ್ನಲ್ಲದೇ ಜ್ಞಾನವನ್ನು ಉದ್ದೀಪನಗೊಳಿಸುವ ಎಲ್ಲ ಬಗೆಯ ಲೇಖನಗಳಿಗೆ ಅವಕಾಶ ಕಲ್ಪಿಸುವುದು ಕರ್ತವ್ಯವೆಂಬಂತೆ ಪತ್ರಿಕೆಗಳು ತಮ್ಮ ನಡೆ ಬದಲಿಸಬೇಕಿದೆ. ಆ ಮೂಲಕ ಪ್ರಜ್ಞಾವಂತ ಓದುಗರಿಗೆ ನಾನಾ ವಿಚಾರಗಳ ಮೇವನ್ನು ಒದಗಿಸಬೇಕಿದೆ.
    ಇತ್ತೀಚೆಗೆ ಅಂಕಣಕಾರ ಸುಧೀಂದ್ರ ಬುಧ್ಯ ಅವರ ಅಂಕಣ ಬರಹಗಳ ಸಂಗ್ರಹ ಕೃತಿಗಳು ಪರದೇಶಿ ಪರಪಂಚ’, ’ನಾಸ್ತಿಕ ರಾಜ ಎಡವಟ್ಟರ ತುತ್ತೂರಿ’ ಅವಳಿ-ಜವಳಿಯಂತೆ ಎಕಕಾಲಕ್ಕೆ ಸದ್ದಿಲ್ಲದೇ ಲೋಕಾರ್ಪಣೆಗೊಂಡಿವೆ. ಈ ಅಂಕಣ ಬರಹವು ಒಂದು ನಿರ್ದಿಷ್ಟ ರಾಜಕೀಯ ಹಾಗೂ ಸೈದ್ಧಾಂತಿಕ ಆಶಯವನ್ನು ಬಿಂಬಿಸುವ ಪತ್ರಿಕೆಯಲ್ಲಿ ನಿರಂತರವಾಗಿ ಪ್ರಕಟಗೊಂಡಿದ್ದರೂಪ್ರಮುಖವಾಗಿ ಈ ಅಂಕಣ ಬರಹಗಳು ರಾಜಕೀಯಆರ್ಥಿಕಸಾಮಾಜಿಕಸಾಹಿತ್ಯಿಕ ಹೀಗೆ ಯಾವುದೋ ಒಂದು ಕ್ಷೇತ್ರದ ಹಣೆಪಟ್ಟಿಯನ್ನು ಅಂಟಿಸಿಕೊಳ್ಳದೇಎಲ್ಲ ವಿಷಯಗಳ ಬಗ್ಗೆ ಸಹಜ ಸ್ಪಂದನೆಯ ಕಾಣ್ಕೆಗಳಾಗಿವೆ. ಓದುಗ ಆತ್ಮವಿಶ್ವಾಸದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಕೆಲವು ಲೇಖನಗಳು ಅವಕಾಶ ಮಾಡಿಕೊಡುತ್ತದೆ ಎಂಬುದು ಗಮನಾರ್ಹ.
    ಸಮಾಜದಲ್ಲಿನ ಆಗುಹೋಗುಗಳಿಗೆ ಥಟ್ಟನೆ ಸ್ಪಂದಿಸುವ ಬಿಸಿರಕ್ತದ ಬರಹಗಳಾಗಿ ಇವು ಕಾಣಿಸಿಕೊಂಡರೂಉತ್ತಮ ವಿಷಯ ಸಂಗ್ರಹದೊಂದಿಗೆ ಲೇಖಕ ತಾನು ನಂಬಿರುವ ವಿಚಾರಗಳನ್ನು ಓದುಗರಿಗೆ ನವಿರಾಗಿ ದಾಟಿಸುವಲ್ಲಿ ಯಶಸ್ವಿಯಾಗುತ್ತಾರೆ. ಆ ಮೂಲಕ ಪ್ರಬುದ್ಧ ಲೇಖಕನಾಗುವ ಸುಳಿವನ್ನು ಬುಧ್ಯ ಅವರು ಮೊದಲ ಪುಸ್ತಕಗಳಲ್ಲಿಯೇ ನೀಡಿಬಿಡುತ್ತಾರೆ.
 ಒಬ್ಬ ಪ್ರಜ್ಞಾವಂತ ಸಮಾಜದಲ್ಲಿನ ಐಬುಗಳನ್ನು ಗುರುತಿಸುತ್ತಾಅವುಗಳಿಗೆ ಲೇಖನದ ಮೂಲಕ ಸ್ಪಂದಿಸಿಸಶಕ್ತ ಹಾಗೂ ನಿರ್ಭೀತ ಬರಹಗಾರನಾಗಿ ಹೊರಹೊಮ್ಮುವ ಪ್ರಕ್ರಿಯೆಯನ್ನು ಬುಧ್ಯ ಅವರ ಅಂಕಣಯಾನದಲ್ಲಿ ಕಾಣಬಹುದಾಗಿದೆ.  ಉತ್ತಮ ಓದುಗನಾಗದೇ ಉತ್ತಮ ಬರವಣಿಗೆ ಸಾಧ್ಯವಿಲ್ಲವೆಂಬುದನ್ನು ಕೂಡ ಅವರ ಬರವಣಿಗೆ ಮತ್ತೊಮ್ಮೆ ಸಾದರ ಪಡಿಸುತ್ತದೆ.
   ಒಂದೇ ಏಟಿಗೆ ಓದಿಸಿಕೊಂಡು ಹೋಗುವ ಈ ಬರಹಗಳು ಸರಳ ನಿರೂಪಣೆ ಹಾಗೂ ಆಕರ್ಷಕ ತಲೆಬರಹದಿಂದಾಗಿಯೇ ಓದುಗನನ್ನು ಸೆಳೆಯುತ್ತದೆ. ಅವರೇ ಮುನ್ನುಡಿಯಲ್ಲಿ ಹೇಳಿಕೊಂಡಂತೆ ಓದುಗರಿಗೆ ಗೊತ್ತಿರುವ ಸಂಗತಿಗಳನ್ನೇ ನೆನಪಿಸುವ ಹಾಗೇ ಹೆಚ್ಚು ಮಾಹಿತಿ ಪಡೆಯಲು ಅನುವಾಗುವಂತೆ ಬರೆದಿದ್ದಾರೆ.
    ಉತ್ಸಾಹವನ್ನು ಪುಟಿದೇಳಿಸುವ ಶೈಲಿಯಲ್ಲಿ ಹಿರಿಯ ಸಾಹಿತಿಗಳಾದ ಅ.ನ.ಕೃಷ್ಣರಾಯರುಶಿವರಾಮ ಕಾರಂತರುಕ್ಷೀರ ಕ್ರಾಂತಿಗೈದ ಕುರಿಯನ್ಹೃದಯತಜ್ಞ ಡಾ.ದೇವಿ ಪ್ರಸಾದ್ ಶೆಟ್ಟಿವಾಮದೇವ ಶಾಸ್ತ್ರಿ ಹೀಗೆ ಹಲವರ ವ್ಯಕ್ತಿಚಿತ್ರಗಳನ್ನು ಒಂದು ಕಥನದ ಶೈಲಿಯಲ್ಲಿ ನಿರೂಪಿಸುತ್ತಾ ಹೋಗಿದ್ದಾರೆ. ರಾಜಕೀಯ ಹಾಗೂ ಸಾಮಾಜಿಕ ವಿಚಾರಗಳನ್ನು ಮಂಡಿಸುವಾಗ ಬುಧ್ಯ ಅವರೊಳಗಿರುವ ಪ್ರಖರ ಬಲಪಂಥೀಯ ಎದ್ದುನಿಲ್ಲುತ್ತಾನೆ. ವ್ಯಕ್ತಿಚಿತ್ರಗಳನ್ನು ಬಿಟ್ಟರೆ ಉಳಿದ ಎಲ್ಲ ಬರಹಗಳು ಬಲಪಂಥೀಯ ಧೋರಣೆಯ ನೆಲೆಲ್ಲಿಯಲ್ಲಿಯೇ ಮಂಡಿತವಾಗುತ್ತದೆ.
      ತಾನು ನಂಬಿದ ರಾಷ್ಟ್ರೀಯ ಸ್ವಯಂಸೇವಾ ಸಂಘದ ತತ್ವಗಳ ಛಾಪು ಬರಹದೆಲ್ಲೆಡೆ ಘನೀಕರಿಸಿದೆ. ಹಾಗೆ ಸಂಘವನ್ನು ಒಪ್ಪಿಕೊಳ್ಳುತ್ತಲೇರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರಾವಧಿಯಲ್ಲಿದ್ದಾಗ ನಡೆದ ದೊಂಬರಟಗಳೆಡೆಗೆ ಸಂಘ ವಹಿಸಿದ್ದ ಮೌನವನ್ನು ಸಂಘದ ಕಟ್ಟಾಳುವಾಗಿಯೇ ಕಟುವಾಗಿ ಪ್ರಶ್ನಿಸುತ್ತಾರೆ. ಹಾಗೇ ಪ್ರಶ್ನಿಸುತ್ತ ಆರ್‌ಎಸ್‌ಎಸ್ ನೆಡಗಿನ ನಿಷ್ಠೆಲೇಖಕನ ಸಾಮಾಜಿಕ ಜವಾಬ್ದಾರಿ ಹಾಗೂ ನಂಬಿಕೆಗಳ ಆತ್ಮಪ್ರತ್ಯಯವನ್ನು ನಿಕಷಕ್ಕೆ ಒಡ್ಡುತ್ತಾರೆ.
     ಶೀರ್ಷಿಕೆ ನಾಸ್ತಿಕ ರಾಜ "ಎಡ" ವಟ್ಟರ ಎನ್ನುವ ಪದಬಳಕೆಯಲ್ಲಿಯೇ ಎಡಪಂಥವನ್ನು ಬಲವಾಗಿ ಮೂದಲಿಸುವ ಒಂದು ಬಗೆ ಇದೆ.ಮೌಢ್ಯವನ್ನು ನಿಷೇಧಿಸುತ್ತೇವೆಂದು ಸಿದ್ದರಾಮಯ್ಯ ನೇತೃತ್ವದ ಕಂಗ್ರೆಸ್ ಸರ್ಕಾರ ಹೊರಟಾಗ ಮೌಢ್ಯ ನಿಯಂತ್ರಣ ಕಾಯ್ದೆ ಧರ್ಮಾತೀತವೇ?, ಹಿಂದೂ ಧರ್ಮದ ಮೇಲಿನ ಸವಾರಿಯೇಎಂಬ ಪ್ರಶ್ನೆಗಳಲ್ಲಿ ಒಬ್ಬ ಸನಾತನಿಯ ಆಕ್ರೋಶ ಇದೆ. ಆದರೆನಂಬಿಕೆ ಸತ್ತ ಮನುಷ್ಯ ಹುಚ್ಚನಾಗುತ್ತಾನೆ. ಭಾರತೀಯ ಅಧ್ಯಾತ್ಮವೆಂದರೆ ಅದು ಮನಃಶಾಸ್ತ್ರವೆಂಬ ಬುಧ್ಯ ಅವರ ಮಾತನ್ನು ಒಪ್ಪತಕ್ಕದಾದರೂಮುಗ್ಧ ಜನರ ನಂಬಿಕೆಯನ್ನು ಬಂqವಾಳ ಮಾಡಿಕೊಂಡು ಸನಾತನ ಧರ್ಮಕ್ಕೆ ಕಳಂಕ ತರುವವರ ಬಗ್ಗೆ ಎಲ್ಲ ಸನಾತನಿಗಳಂತೆ ಇವರು ಮೃದುಧೋರಣೆ ತಾಳುತ್ತಾರೆ.
  ಈ ನೆಲದ ಮೌಲ್ಯಗಳಷ್ಟೆ ಶ್ರೇಷ್ಠ ಹಾಗೂ ಅದಷ್ಟೆ ಉಳಿಯಬೇಕೆಂಬ ಬಲಪಂಥೀಯ ಮನಸ್ಥಿತಿಯ ಹಠ ಹಲವು ಬರಹಗಳಲ್ಲಿ ಎದ್ದುಕಾಣುತ್ತದೆ. ಈ ನೆಲದ ನಂಬಿಕೆಗಳನ್ನು  ಪ್ರಶ್ನಿಸುವವಿಮರ್ಶಿಸುವ ಮನೋಭಾವವೆಲ್ಲವೂ ಪಾಶ್ಚಿಮಾತ್ಯದ ಎರವಲು ಎಂಬ ತಪ್ಪು ಗ್ರಹಿಕೆ ಆಳವಾಗಿ ಬೇರೂರಿದೆ.
     ಪ್ರಶ್ನಿಸುವವರೆಲ್ಲರೂ ಎಡಪಂಥೀಯರು ಎಂಬ ಮನೋಭಾವ ಒಡಕನ್ನು ಮೂಡಿಸುತ್ತದಷ್ಟೆ. ನಂಬಿಕೆಗಳನ್ನು ತರ್ಕದಿಂದ ತೀಡುವಪರಂಪರೆಯನ್ನು ಪರಾಮರ್ಶಿಸುವ ಹಾಗೂ ಅದನ್ನು ವರ್ತಮಾನಕ್ಕೆ ಹೊಂದಿಸಿಕೊಳ್ಳುವ ಮನಸ್ಥಿತಿ ಅನಾದಿ ಕಾಲದಿಂದಲೂ ಈ ನೆಲದ ಸ್ವತ್ತಾಗಿದೆ. ಪ್ರಶ್ನೆಸಂವಾದಕ್ಕೆ ಜನಸಾಮಾನ್ಯನಿಂದ ಹಿಡಿದು ಮಹಾನ್ ದ್ರಷ್ಟಾರರು ಅವಕಾಶ ಕಲ್ಪಿಸಿದ್ದರು .ಹಾಗಾಗಿಯೇ ಈ ನೆಲದಲ್ಲಿ ಸಾಂಸ್ಕೃತಿಕ ಹಾಗೂ ಧಾರ್ಮಿಕ ವೈವಿಧ್ಯ ಸೃಷ್ಟಿಯಾಯಿತು. ಹಾಗೂ ಅದರಲ್ಲಿಯೇ ಏಕತೆಯನ್ನು ಸಾಧಿಸಲು ಸಾಧ್ಯವಾಯಿತು. ಎಲ್ಲವನ್ನು ವಿಮರ್ಶೆಯಿಂದ ನೋಡಿರುವುದಕ್ಕೆ ವಿಮರ್ಶಾ ಮೀಮಾಂಸೆಗಳೇ ಆಧಾರ ಎಂಬ ಅಂಶವನ್ನು ಬಹುತೇಕ ಬಲಪಂಥೀಯರು ಮರೆಯುತ್ತಾರೆ. ಇದಕ್ಕೆ ಬುಧ್ಯ ಕೂಡ ಹೊರತಲ್ಲ.
     ಇನ್ನೂ ಬುಧ್ಯ ಅವರ ಅಂಕಣ ಬರಹದ ವಸ್ತುವಿಷಯದ ದೃಷ್ಟಿಕೋನಕ್ಕೆ ಹಲವು ಚೌಕಟ್ಟಿದೆ. ಆವರಣವಿರದೇ ಯಾವ ಹೂರಣವನ್ನು ಸಮರ್ಪಕವಾಗಿ ಮಂಡಿಸಲು ಸಾಧ್ಯವಿಲ್ಲದಿರುವಾಗ ಈ ಚೌಕಟ್ಟಿನ ಅಸ್ತಿತ್ವವನ್ನು ಓದುಗ ನಿರ್ಲಕ್ಷ್ಯಿಸುವುದು ಒಳಿತು. ಈ ನೆಲದ ಸಂಸ್ಕೃತಿದೇಶಭಿಮಾನಸನಾತನ ಧರ್ಮದ ಪ್ರೇಮರಾಷ್ಟ್ರೀಯವಾದ ಒಂದು ಸಾಲಿಗೆ ಸೇರಿದರೆ ಬದುಕಿಗೆ ಒಂದಷ್ಟು ಉತ್ಸಾಹ ತುಂಬುವ ಮಹನೀಯರ ಪಟ್ಟಿಯೂ ಇದರಲ್ಲಿದೆ. ಆಯಾ ಘಟ್ಟದ ರಾಜಕೀಯ ವಿದ್ಯಮಾನಗಳು ಹಾಗೂ ಪರದೇಶದಲ್ಲಿದ್ದುಕೊಂಡು ಅಮೆರಿಕ ಹಾಗೂ ತನ್ನ ನೆಲವನ್ನು ಅಪ್ಪಟ್ಟ ಭಾರತೀಯನಾಗಿಯೇ ಸಮೀಕರಿಸುತ್ತಾರೆ. ಆದರೆ ವಿಷಯ ಮಂಡನೆಗೆ ಬಂದಾಗ ಎಲ್ಲವನ್ನು ವೃತ್ತದಿಂದ ಹೊರಗೆ ನಿಂತು ನೋಡುವುದು ಬುಧ್ಯ ಅವರ ಶೈಲಿ.
    ಮೀಸಲಾತಿಯ ಊರುಗೋಲುಉರುಳಾಗದಿರಲಿ ಹಾಗೂ ಜಾತಿ ಮೀರದ ಭಾರತ ಈ ಎರಡು ಲೇಖನಗಳನ್ನು ಮಖಾಮುಖಿಯಾಗಿಸಿದರೆಲೇಖಕರ ಹಲವು ದ್ವಂದಗಳಿಗೆ ಉತ್ತರ ದೊರೆತು ಬಿಡುತ್ತದೆ. ಅಲ್ಲದೇ ಲೇಖಕನೆಡೆಗೆ ಓದುಗನಿಗಿರುವ ಗೊಂದಲವು ಪರಿಹಾರಗೊಳ್ಳುತ್ತದೆ. ಈ ಎರಡು ಲೇಖನಗಳು ಲೇಖಕನಾಗಿ ಬುಧ್ಯ ಅವರು ಕ್ರಮಿಸಿದ ಹಾದಿ ಹಾಗೂ ಅವರ ಮುಂದಿನ ಬರಹದ ನಡೆಯನ್ನು ಸ್ಪಷ್ಟಗೊಳಿಸುತ್ತದೆ,
   ವಿವೇಕರ ಗ್ರಹಿಕೆಯಲ್ಲೂ ಪೂರ್ವಗ್ರಹದ ಪೊರೆ ಎಂಬ ಲೇಖನದಲ್ಲಿ ವಿವೇಕಾನಂದರನ್ನು ಪೂರ್ವಗ್ರಹದಿಂದ ನೋಡಿದರೆ ಒಂದೋ ಎಡ ಅಥವಾ ಬಲ ಸಿದ್ದಾಂತದಲ್ಲಿ ರೂಪುಗೊಂಡ ಭಾರತ ಎದುರಿಗೆ ನಿಲ್ಲುತ್ತದೆ. ಪೂರ್ವಗ್ರಹದ ಪೊರೆ ಕಳಚಿ ಅವರ ಒಟ್ಟು ಚಿಂತನೆಗಳನ್ನು ಮನನ ಮಾಡಿದಾಗಷ್ಟೆ ಸಮಗ್ರ ಭಾರತ ಅರ್ಥವಾದೀತು ಎಂಬ ಮಾತುಗಳಲ್ಲಿ ಲೇಖಕ ಸುಧೀಂದ್ರ ಬುಧ್ಯ ಅವರ ಒಟ್ಟು ಬರವಣಿಗೆಯ ಆಶಯ ಹಾಗೂ ಅದರ ಪ್ರಸ್ತುತತೆಯನ್ನು ಗ್ರಹಿಸಬಹುದಾಗಿದೆ. ಈ ಪುಸ್ತಕಗಳಲ್ಲಿನ ಬರಹಗಳೆಲ್ಲವೂ ಚಿಂತನಶೀಲವಷ್ಟೆ ಅಲ್ಲದೇಕವಿ ಮನಸ್ಸಿನ ಆರ್ದ್ರ ಭಾವದಿಂದ ರೂಪುಗೊಂಡಿದೆ. ಹಾಗಾಗಿಯೇ ನವಿರಾದಸರಳ ಹಾಗೂ ಪ್ರಾಸಬದ್ಧ ನಿರೂಪಣೆ ಬುಧ್ಯ ಅವರಿಗೆ ದಕ್ಕಿದೆ.
    ಅಪರಿಪೂರ್ಣರಾದವರು ಮಾತ್ರ ಸೃಜನಶೀಲರಾಗಲು ಸಾಧ್ಯ. ಬುಧ್ಯ ಅವರು ತಮ್ಮ ಮೊದಲ ಪುಸ್ತಕಗಳಲ್ಲಿಯೇ ಅಪರಿಪೂರ್ಣತೆಯ ಅನಂತ ಜಾಡನ್ನು ಓದುಗರಿಗೆ ಒದಗಿಸಿದ್ದಾರೆ. ಆ ಮೂಲಕವೇ ಇನ್ನಷ್ಟು ಸಶಕ್ತ ಬರವಣಿಗೆಯ ಜವಾಬ್ದಾರಿಯನ್ನು ಹೆಗಲೇರಿಸಿಕೊಳ್ಳುತ್ತಾರೆ.
    ಮನುಷ್ಯ ತಾನು ಕಂಡುಕೊಂಡ ಪರಿಸರದಿಂದಾಗಿ ಒಂದಷ್ಟು ಪೂರ್ವಗ್ರಹಗಳನ್ನು ಅನಾಯಾಸವಾಗಿ ಪಡೆದುಕೊಳ್ಳುತ್ತಾನೆ. ಚಿಂತನೆಗಳು ಸೈದ್ದಾಂತಿಕವಾಗಿ ರೂಪುಗೊಂಡ ಮೇಲಂತೂ ಅವ ಬಿಟ್ಟರೂಪೂರ್ವಗ್ರಹ ಬಿಡದು. ಒಂದಷ್ಟು ಪೂರ್ವಗ್ರಹಗಳನ್ನು ಹೆಗೆಲೇರಿಸಿಕೊಳ್ಳುವಅದನ್ನೇ ಮೀರಿ ಹೊಸತೊಂದು ಪೂರ್ವಗ್ರಹಕ್ಕೆ ಅಂಟಿಕೊಳ್ಳುವ ಜಾಯಮಾನ ಮನುಷ್ಯನಿಗೆ ಅನಾಮತ್ತಾಗಿ ಒದಗಿ ಬಂದಿದೆ. ಇದಕ್ಕೆ ಕಾಲಭಾಷೆಜನಾಂಗಪ್ರಾದೇಶಿಕತೆಸಂಸ್ಕೃತಿ ಎಲ್ಲವೂ ನೆಪವಾಗುತ್ತ ಹೋಗುತ್ತದೆ.
    ಇರುವ ಅಷ್ಟೂ ಪೂರ್ವಗ್ರಹಗಳನ್ನು ಮೀರುವ ಪ್ರಕ್ರಿಯೆಯಲ್ಲಿಯೇ ಅಕ್ಷರ ಲೋಕದ ಸಾರ್ಥಕ್ಯ ಅಡಗಿದೆ. ಹಾಗೂ ಹಾಗೇ ಆಗುವುದು ಅಕ್ಷರದ ಜವಾಬ್ದಾರಿಯೂ ಆಗಿದೆ. ಮುಂದಿನ ದಿನಗಳಲ್ಲಿ ಬುಧ್ಯ ಅವರ ಬರವಣಿಗೆಯ ನಡೆ ಈ ದಿಸೆಯಲ್ಲಿ ಸಾಗಲಿ. ಹಾಗೂ ಅವರ ಬತ್ತಳಿಕೆಯಿಂದ ಇನ್ನಷ್ಟು ಮೊನಚು ಬರಹದ ಬಾಣವನ್ನು ನಿರೀಕ್ಷಿಸೋಣ.

No comments:

Post a Comment