Thursday, 26 February 2015

ನವಿರು ನಿರೂಪಣೆಯ ಕಥನಗಾರಿಕೆ....



  


ಆಧುನೀಕರಣ, ಜಾಗತೀಕರಣದ ಹೆಜ್ಜೆಗಳು ಬಲವಾಗುತ್ತಿದ್ದರೂ, ‘ಅನಾದಿ ಕಾಲದಿಂದಲೂ ಬೇರು ಬಿಟ್ಟಿರುವ ಜಾತಿ ಹಾಗೂ ವರ್ಗ ಸಂಘರ್ಷಗಳಿಂದ ನೆಲದ ಬೇಗೆ ಹೆಚ್ಚುತ್ತಲೇ ಇದೆ.  ಉಳ್ಳವ- ಇಲ್ಲದವ, ಮೇಲು-ಕೀಳು ಮಹಾನ್ ಕಂದಕದ ಪರಿಕಲ್ಪನೆಗಳು ಕೇವಲ ಗ್ರಾಮಗಳಿಗೆ ಸೀಮಿತವಾಗದೆ, ಅಕಾಡೆಮಿಕ್ ಹಾಗೂ ವಿಶ್ವವಿದ್ಯಾಲಯ, ಎರಡು, ಮೂರು ಪದವಿಗಳನ್ನು ಹೆಸರಿನ ಮುಂದಿಗೆ ಅಂಟಿಸಿಕೊಂಡುವರ ಮಟ್ಟದಲ್ಲಿಯೂ, ಕೊನೆಗೆ, ಅಕ್ಷರ ಲೋಕಕ್ಕೂ ತಟ್ಟಿ ಅಲ್ಲೊಂದು ಧ್ರುವೀಕರಣ, ಜಿದ್ದಾಜಿದ್ದಿಗೆ ಕಾರಣವಾಗುತ್ತಿದೆ ಎನ್ನುವುದು ನಾಚಿಕೆ ಪಡಬೇಕಾದ ಸಂಗತಿಯೇ ಸರಿ.
ಜಾತಿ ಎನ್ನುವುದು ಪ್ರತಿಷ್ಠೆ, ಶ್ರೇಷ್ಠತೆಯ ವ್ಯಸನ, ಕೀಳರಿಮೆಗೊಂದು ಕಾರಣ, ಪ್ರತಿಭಟನೆಗೆ ವೇದಿಕೆ, ಸರ್ಕಾರದ ಸೌಲಭ್ಯ, ಪ್ರತಿಭೆ, ಪುರಸ್ಕಾರ ಪಡೆಯುವ ಮಾನದಂಡ ಆಗಿದೆ ಎನ್ನುವುದು ವಾಸ್ತವದ ಒಂದು ಮುಖ. ಆದರೆ, ಇದೆ ಜಾತಿ ಪದ್ಧತಿಯೂ  ಮಾನವೀಯ ಸಂಬಂಧಗಳನ್ನೇ ಕೊಲ್ಲುವ, ಪ್ರಳಯಾಂತಕ ತಲ್ಲಣಗಳನ್ನು ಎಬ್ಬಿಸುವ, ನೆಲದ ಸಮಗ್ರ ಅಭಿವೃದ್ಧಿಗೆ ತೊಡರುಗಾಲಗಿ ನಿಂತು ಗಹಗಹಿಸಿ ನಕ್ಕಂತೆ ಭಾಸವಾಗುತ್ತದೆ.
ಜಾತಿಯ ವ್ಯವಸ್ಥೆ ಸೃಷ್ಟಿಸಿದ ರೋದನ ಪ್ರಪಂಚವನ್ನು ಸಮರ್ಥವಾಗಿ ಕಥನ ಪ್ರಪಂಚಕ್ಕೆ ತರುವಲ್ಲಿ  ಹನುಮಂತ ಹಾಲಿಗೇರಿ ಅವರು ತಮ್ಮೊಳಗಿನ ಕತೆಗಾರನನ್ನು ಸಶಕ್ತವಾಗಿ ದುಡಿಸಿಕೊಂಡಿದ್ದಾರೆ.  ಅವರಮಠದ ಹೋರಿಕಥಾ ಸಂಕಲನವು ಉತ್ತರ ಕರ್ನಾಟಕ ಭಾಗದ ಜನರ ಜೀವನವನ್ನು, ಅದರ ಅವಿಭಾಜ್ಯ ಅಂಗವಾಗಿರುವ ಮೇಲು ಕೀಳಿನ ಶ್ರೇಣಿಕೃತ ವ್ಯವಸ್ಥೆಯನ್ನು, ಮೂಢನಂಬಿಕೆಗಳ ಸುತ್ತ ನಡೆಯುವ ಬದುಕನ್ನು ಶ್ರುತಿ ತಪ್ಪದಂತೆ ಚಿತ್ರಿಸಿದೆ.
ಹನುಮಂತ ಹಾಲಿಗೇರಿ ಅವರು ಎಕಕಾಲಕ್ಕೆ ಪತ್ರಕರ್ತ ಹಾಗೂ ಕತೆಗಾರ ಎರಡೂ ಆಗಿರುವುದರಿಂದ ಕಥಾ ಪ್ರಪಂಚದ ಸಾಧ್ಯತೆಗಳು ವಿಸ್ತಾರ ಪಡೆಯುತ್ತಾ ಹೋಗಿರುವುದನ್ನು ಹನ್ನೊಂದು ಕತೆಗಳಲ್ಲೂ ಕಾಣಲು ಸಾಧ್ಯವಾಗಿದೆ. ಪುಸ್ತಕದ ಶೀರ್ಷಿಕೆ ಮಠದ ಹೋರಿ ಕತೆಯಲ್ಲಿ ಹೋರಿಯೇ ತನ್ನ ಕತೆಯನ್ನು ನಿರೂಪಿಸುತ್ತಾ ಹೋಗುತ್ತದೆ. ಹೋರಿಯು ತನ್ನೊಡಲ ದುಃಖವನ್ನಷ್ಟೇ ಅರುಹಿದ್ದರೆ, ಇತರೆ ಕತೆಗಳಂತೆ ಸಾಮಾನ್ಯವಾಗಿ ಬಿಡುತ್ತಿತ್ತು.  ಆದರೆ, ಹೋರಿ ಮನುಷ್ಯ ಕುಲದ ಸಂಕಟಗಳನ್ನು, ಅದರಲ್ಲೂ ತನ್ನಂತೆ ಮುದಿ ಬೀಳುವ ನೂರಾರು ಹೋರಿ ಹಾಗೂ ಹಸುಗಳನ್ನು ಸಂರಕ್ಷಿಸುವ ಸ್ವಾಮೀಜಿಯ ತವಕಗಳನ್ನು ಕಟ್ಟಿಕೊಡುತ್ತಾ ಹೋಗುತ್ತದೆ. ಪಶುವಿನಲ್ಲಿರಬಹುದಾದ ಅಂತಃಕರಣವನ್ನು ಸೊಗಸಾಗಿ ಅಭಿವ್ಯಕ್ತಿಗೊಳಿಸಿದ್ದಾರೆ. ಮೂಲಕ ಮನುಷ್ಯನ ಅಸಹ್ಯ ಮುಖವನ್ನು ಹೊರಗೆಡವಿದ್ದಾರೆ.
ಪತ್ರಿಕೆಯು ಮುಖಪುಟಕ್ಕೆ ಹೊಂದಬಹುದಾದದ ಸುದ್ದಿಯ ಹಿಂದೆ ಬಿದ್ದ ಪತ್ರಕರ್ತ, ಅದೇ ಸುದ್ದಿಗೆ ಸಂಬಂಧಿಸಿದಂತೆ ತನ್ನ ಭಾವಲೋಕದಲ್ಲಿ ಏಳುವ ಹಲವು ಪ್ರಶ್ನೆಗಳನ್ನು, ನಿಕಷಕ್ಕೆ ಒಡ್ಡುತ್ತಲೇ ಕಥನ ಆಯಾಮವನ್ನು ಸೃಷ್ಟಿಸಲು ಹಾಲಗೇರಿ ಅವರಂತಹ ಸೃಜನಶೀಲ ಪತ್ರಕರ್ತರಿಗೆ  ಮಾತ್ರ ಸಾಧ್ಯವೇನೋ. ಕೇವಲ ಸುದ್ದಿಯೆಂದು ರದ್ದಿಯಾಗಿಸಬಹುದಾದ ವಸ್ತುವಿಷಯವನ್ನೇ ಕಥನ ಕ್ರಮಕ್ಕೆ ಒಗ್ಗಿಸಿದ್ದಾರೆ. ಇಲ್ಲವಾದರೆ, ಭೂಸ್ವಾಧೀನ, ಬಾಡಿಗೆ ಪ್ರತಿಭಟನಾಕಾರರು, ಮುದಿ ಹಸುಗಳ ಮಾರಾಟ ಜಾಲ, ನಗರೀಕರಣ ಇಂತಹ ವರ್ತಮಾನದ ಅದೆಷ್ಟು ವಿಚಾರಗಳ ಸುತ್ತವೇ ಕತೆಯನ್ನು ಪ್ರಜ್ಞಾಪೂರ್ವಕವಾಗಿ ಹಣೆಯಲು ಸಾಧ್ಯವಾಗುತ್ತಿರಲಿಲ್ಲ.
ಮೂಕ ದ್ಯಾವ್ರು ಕತೆಯಲ್ಲಿ ಅನ್ಯಾಯ ಹಾಗೂ ತುಳಿತಕ್ಕೆ ಒಳಗಾದ ಶೇಷಪ್ಪನ ಜೀವದಲ್ಲಿ ಮೂಕ ಮರುಗವ್ವ,ಕೂಗ ದುರಗವ್ವ ಎಂಬ ಎರಡು ಹೆಣ್ಣುಗಳ ದೇವತೆಗಳು ಪ್ರವೇಶ ಪಡೆಯುವುದು, ಪರಿಸ್ಥಿತಿಯ ಲಾಭ ಪಡೆಯಲು ಆತ ಯತ್ನಿಸುವುದನ್ನು ವಿಡಂಬನಾತ್ಮಕವಾಗಿ ವಿಶ್ಲೇಷಿಸುತ್ತಾ ಹೋಗಿದ್ದಾರೆ. ಆದರೆ ವಿಡಂಬನೆಯು ತಾರ್ಕಿಕ ನೆಲೆಯಲ್ಲಿ ಕಥನ ರೂಪ , ಪಡೆಯುತ್ತಾ ಅಂತ್ಯಗೊಳ್ಳುತ್ತದೆ.
ಜಾತಿ ಸಂಘರ್ಷದಿಂದಾಚೆಗೆ ಹೋಗದ ಏಕತಾನತೆಯೂ ಕಥಾ ಸಂಕಲನದಲ್ಲಿ ಅಡಕವಾಗಿದೆ. ಆದರೆ, ಜಾತಿ ಎನ್ನುವುದು ಇಷ್ಟೊಂದು ಪ್ರಾಬಲ್ಯ ಮೆರೆಯುತ್ತಿರುವ ಹೊತ್ತಿನಲ್ಲಿಯೂ ಅದು ಸೃಷ್ಟಿಸುತ್ತಿರುವ ತಲ್ಲಣಗಳಿಂದ ಹೊರಬರಲು ಸೃಜನಶೀಲರಿಗೂ ಸಾಧ್ಯವೇ ಇಲ್ಲವೆನ್ನುವುದನ್ನು ಓದುಗ ಅರ್ಥಮಾಡಿಕೊಳ್ಳಬೇಕಿದೆ. ತಂತ್ರಜ್ಞಾನ, ಆಧುನೀಕ ಯುಗದಲ್ಲೂ ಜಾತಿ ಇಷ್ಟೊಂದು ಅಪ್ರಜ್ಞಾಪೂರ್ವಕವಾಗಿ ಕಥೆ ಹಾಗೂ ಜನರ ಬದುಕಿನಲ್ಲಿ ಹಾಸುಹೊಕ್ಕಾಗಿರುವುದರ ಬಗ್ಗೆ  ಸಂಶೋಧನೆ ನಡೆಸಲು ಸಮಾಜಶಾಸ್ತ್ರಕಾರರಿಗೆ ಸುಸಮಯ.
ಮಾನಸಿಕ ಅಸ್ವಸ್ಥರ ಲೈಂಗಿಕ ಅಭೀಪ್ಸೆ ಹಾಗೂ ಅದನ್ನು ತೃಪ್ತಿಪಡಿಸುವುದು ಕೂಡ ಹುಚ್ಚುತನ ಚಿಕಿತ್ಸೆಯ ಒಂದು ಭಾಗ ಎಂಬುದು ಪಾಶ್ಚಿಮಾತ್ಯ ದೇಶಗಳಲ್ಲಿ ಈಗಾಗಲೇ ಚಾಲ್ತಿಯಲ್ಲಿದೆ. ಇದಕ್ಕಾಗಿ ಅವರು ಲೈಂಗಿಕ ಕಾರ್ಯಕರ್ತರನ್ನು ಕೂಡ ನೇಮಿಸಿಕೊಳ್ಳುತ್ತಾರೆ. ಹೊಸ ವಿಚಾರವನ್ನು ಹಾಲಿಗೇರಿ ಅವರು ಗೆಲುವೆನೆಂಬುದು ಸೋಲುವ ಮಾತು ಕತೆಯಲ್ಲಿ ತಂದಿದ್ದಾರೆ.  ಎಲ್ಲ ಭಾವಗಳಿಗೂ ಶೂನ್ಯ ಪ್ರತಿಕ್ರಿಯೆ ನೀಡುವ ಹುಚ್ಚಿ, ಲೈಂಗಿಕ ಆಸೆಯನ್ನು ಮಾತ್ರ ಕಣ್ಣಲ್ಲಿ ತೋರ್ಪಡಿಸುತ್ತಾಳೆಂಬುದು ಕತೆಯ ನಿರೂಪಕನ ವಿಶ್ಲೇಷಣೆ. ಯಾವ ಭಾವಕ್ಕೂ ಪ್ರತಿಕ್ರಿಯೆ ನೀಡದ ಅವಳಲ್ಲಿ ಕಂಡ ಆಸೆ ನಿರೂಪಕನದ್ದೇ? ಎಂಬ ಸಂಶಯವೂ ಓದುಗನಲ್ಲಿ ವ್ಯಕ್ತವಾದರೆ ಆಶ್ಚರ್ಯವಿಲ್ಲ.
ಇನ್ನು, ಹಾಲಿಗೇರಿ ಅವರು ಪ್ರತಕರ್ತರಾಗಿರುವುದರಿಂದಲೋ ಏನೋ, ತಿಳಿದ ಅಷ್ಟು ವಿಷಯ ಒಂದೇ ಉಸಿರಿನಲ್ಲಿ ಹೇಳಿಬಿಡುವ ಉಮೇದು ಎದ್ದುಕಾಣುತ್ತದೆ. ಇದು ಕಥನ ಧಾಟಿಯ ಆಂತರ್ಯದ ತಾಳ್ಮೆಯನ್ನು ಒಮ್ಮೊಮ್ಮೆ ಕೆಡಿಸುತ್ತದೆ. ಉತ್ತರ ಕರ್ನಾಟಕ ಜವಾರಿ ಭಾಷೆಯಲ್ಲಿಯೇ ಕತೆಗಳಿರುವುದರಿಂದ ಸಮಸ್ತ ಕರ್ನಾಟಕದ ಕನ್ನಡಿಗರು ಕತೆಗಳನ್ನು ಬಹುಬೇಗ ಆತುಕೊಳ್ಳುವುದು ಕಷ್ಟವಾಗುತ್ತದೆ. “ಭಾಗವ್ವಕತೆಯಲ್ಲಿನ ಪ್ರಮುಖ ಪಾತ್ರಧಾರಿ ಭಾಗವ್ವ ತನ್ನ ಮೂಗ ಗಂಡನಿದ್ದರೂ, ಶಿವಜ್ಜನೊಂದಿಗೆ ಅಕ್ರಮ ಸಂಬಂಧವಿರಿಸಿಕೊಳ್ಳುತ್ತಾಳೆ. ಶಿವಜ್ಜ ಹೇಗೆಲ್ಲಾ ಭಾಗವ್ವನನ್ನು ಒಲಿಸಿಕೊಂಡ ಎಂಬುದನ್ನು ಹೇಳುತ್ತಾನೆ.  ಆದರೆ ಭಾಗವ್ವನ ಅಂತರಂಗವನ್ನು ಬಿಚ್ಚಿಡುವಲ್ಲಿ ಕಥೆಗಾರರು ಸೋಲುತ್ತಾರೆ. ಹಾಗೇ ಮರೆಮಾಚುವುದು ಕೂಡ ಕಥನಗಾರಿಕೆಯು ಒಂದು ತಂತ್ರವೇ ಆಗಿದ್ದಿರಬಹುದೇನೋ.?
ವೇಗದ ನಿರೂಪಣೆಯಿದ್ದರೂ, ಅಷ್ಟೇ ವೇಗದಲ್ಲಿ ಓದಿಸಿಕೊಂಡು ಹೋಗಬಹುದಾದ ಕತೆಗಳು ಇದರಲ್ಲಿವೆ. ನವಿರಾದ ಹಾಸ್ಯ, ವಿಡಂಬನೆ ಹಾಗೂ ಕಥನ ಕಟ್ಟುವ ಕ್ರಮವನ್ನು ಆಸ್ಥೆ ವಹಿಸಿ ಹಾಲಿಗೇರಿ ಅವರು ಪಡೆದುಕೊಂಡಿದ್ದಾರೆ. ಅದು ಇನ್ನಷ್ಟು ವಿಸ್ತಾರವಾಗಲಿ.

No comments:

Post a Comment