Thursday, 9 July 2015

‘ಸ್ವಂತಿ’ಯ ನಡುವೆ ಮಾಸದಿರಲಿ ಸ್ವಂತಿಕೆಯ ಬಿಂಬ


courtesy; google


 ‘ನಮ್ಮ ಜಾತಿಯಲ್ಲಿ ಹೆಣ್ಣಿಗೆ 18 ವರ್ಷ ಆಯ್ತೆಂದರೆ, ಮದುವೆ ಮಾಡಿಬಿಡ್ತೀವಿ. ಆಮೇಲೆ ಗಂಡ ಓದಿಸಿದ್ರೆ, ಓದುತ್ತಾಳೆ, ಇಲ್ಲಾಂದರೆ, ಮನೆಯಲ್ಲಿ ಕೆಲಸ ಮಾಡಿಕೊಂಡು ಇರ್ತಾಳೆ. ಮನೆಯ ಮೂರು ಹೆಣ್ಣು ಮಕ್ಕಳಿಗೂ 18 ವರ್ಷ ತುಂಬೊ ಮುಂಚೆ ಮದುವೆ ಮಾಡಿದ್ದೀವಿ’ ಹೀಗೆ ಎದುರು ಮನೆ ಆಂಟಿಯ ಪ್ರಲಾಪ. ಹದಿನೆಂಟರ ನಂತರ ಹೆಣ್ಣಮಕ್ಕಳು ಮನೆಯಲ್ಲಿದ್ದರೆ ಅಪರಾಧ; ಅದು ಈ ಕಾಲದಲ್ಲಿ!
   ತರಕಾರಿಗೆ ಅಂತ ಪ್ರಾವಿಷನ್ ಸ್ಟೋರ್ ಕಡೆ ಹೋಗಿದ್ದೆ. ಲೋಕಾಭಿರಾಮವಾಗಿ ಹರಟುತ್ತಿದ್ದ ಪ್ರಾವಿಷನ್ ಸ್ಟೋರ್ ಆಂಟಿಯ ಮಾತು ಎಂಜಿನಿಯರಿಂಗ್ ಕೊನೆಯ ವರ್ಷ ಓದುತ್ತಿರುವ ತಮ್ಮ ಮಗಳ ಕಡೆ ಹೊರಳಿತು. ‘ಅವರಪ್ಪ ಮಿಲಿಟರಿಯಲ್ಲಿದ್ದವರು, ಕೆಲಸಕ್ಕೆ ಕಳುಹಿಸಲ್ಲ, ಎಂಜಿನಿಯರಿಂಗ್ ಮುಗಿದ ಕೂಡಲೇ, ಗಂಡು ನೋಡಿ ಮದುವೆ ಮಾಡ್ತೀವಿ. ಗಂಡನಿಗೆ ಇಷ್ಟ ಇದ್ದರೆ, ಕೆಲಸಕ್ಕೆ ಹೋಗ್ತಾಳೆ. ಹೆಣ್ಣು ಮಕ್ಕಳಿಗೆ ಓದಿಸಬೇಕು. ಇಲ್ಲ ಅಂದರೆ ಒಳ್ಳೆ ನೌಕರಿಯಲ್ಲಿರುವ ವರ ಸಿಗಲ್ಲ!’... ಹೀಗೆ ಆಂಟಿ ಹೇಳ್ತಾ ಹೋದ್ರು.. ಯಾವ ತರಕಾರಿ ತಗೊಬೇಕು ಅನ್ನೊ ಗೊಂದಲ ಶುರುವಾಗಿ ಬರಿಗೈಲಿ ಹಾಗೇ ವಾಪಸ್ಸಾದೆ.
     ನಿನ್ನ ಹುಡುಗಿ ಹೇಗಿರಬೇಕು? ಅಂತಾ ಕೇಳ್ತಿದ್ದೆ ತುಂಬಾ ಓದಿಕೊಂಡ ಗೆಳೆಯನೊಬ್ಬನಿಗೆ. ಅವನ ಉತ್ತರ ಹೀಗಿತ್ತು ‘ನನ್ನ ಬೇಕು-–ಬೇಡಗಳನ್ನೆಲ್ಲ ಅರ್ಥ ಮಾಡಿಕೊಂಡು, ಅಚ್ಚುಕಟ್ಟಾಗಿ ಅಡುಗೆ ಮಾಡಿಕೊಂಡು, ಮನೆಯಲ್ಲಿಯೇ ಇರುವ ಹೆಂಡತಿಯಾದರೆ ಸಾಕು’!
    ಕಳೆದ ವಾರವಷ್ಟೆ ಸಾಮಾಜಿಕ ಜಾಲತಾಣದಲ್ಲಿನ ಜಾಣರೆಲ್ಲರೂ ‘ಸೆಲ್ಫಿ ವಿತ್ ಡಾಟರ್’ ಅಭಿಯಾನದ ಭಾಗವಾಗಿದ್ದನ್ನು ಗಮನಿಸಿದೆ.  ಗೌರವದ, ಮಮತೆಯ ಭಂಗಿಗಳಲ್ಲಿ ಅಪ್ಪಂದಿರು, ಅಮ್ಮಂದಿರು ತಮ್ಮ ಮಗಳೊಂದಿಗೆ ತೆಗೆಸಿಕೊಂಡ ಪೋಟೋಗಳನ್ನು ನೋಡೋಕೇ ಅದೆಷ್ಟು ಚಂದ!. ಎಲ್ಲ ದಿನಾಚರಣೆಗಳಂತೆ ಇದು ಒಂದು ದಿನದ ಸಂಭ್ರಮ. ಎಲ್ಲ ಸವಾಲಿನ ಅಲೆಗಳ ನಡುವೆಯೂ ಇರುವ ನೀರ ಮೇಲಿನ ಗುಳ್ಳೆ.
   ಪ್ರಚಾರದ ತಂತ್ರವಿಲ್ಲದೇ ಯಾವುದೇ  ವಿಷಯ ಜನರನ್ನು ಸರಾಗವಾಗಿ ಮುಟ್ಟದು ಎಂಬುದು ನಿಜ. ಆದರೆ, ಕೇವಲ ಪ್ರಚಾರದ ಗಿಮಿಕ್‌ಗಳಿಗೆ ಹೆಣ್ಣಿನ ಕುರಿತ ಕಾಳಜಿ ಸೀಮಿತವಾಗಬಾರದು ಎಂಬುದು ನನ್ನಂತಹ ಸಾಮಾನ್ಯಳ ಅಪೇಕ್ಷೆ.ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕೈಪಿಡಿ ಮೇಲೆ ಕಣ್ಣಾಡಿಸಿದರೆ, ಹೆಣ್ಣು ಮಕ್ಕಳ ಹಕ್ಕು ಹಾಗೂ ಕರ್ತವ್ಯ, ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಉಪಯೋಗವಿಲ್ಲದ ಆಕರ್ಷಣೀಯ ಘೋಷಣೆಗಳು ಸಿಗುತ್ತವೆ. ಆದರೆ ಈ ಬಾರಿ ಖುದ್ದು ಪ್ರಧಾನಿ ‘ಸೆಲ್ಫಿ ವಿತ್ ಡಾಟರ್’ಗೆ ಕರೆ ನೀಡಿರುವುದು ಎಲ್ಲರ ಸಂಭ್ರಮಕ್ಕೆ ಕಾರಣ.
    ಇರಲಿ, ಸೆಲ್ಫಿ ವಿತ್ ಡಾಟರ್’ ನ ಹಿಂದೆ ಘನ ಉದ್ದೇಶ ಅಡಗಿರುವುದರಿಂದ, ವಿಷಯ ಭೂಮಿಕೆಯನ್ನು ಕೇವಲ ಛಾಯಾಚಿತ್ರದ ಸಂಭ್ರಮಕ್ಕೆ ಸೀಮಿತಗೊಳಿಸಿ ಬಿಡಲು ಸಾಧ್ಯವಿಲ್ಲ. ನಮ್ಮ ಮನೆಯ ಮಗಳು, ನಮ್ಮ ಹೆಮ್ಮೆಯಾಗಿದ್ದಾಳೆಯೇ? ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಹೊತ್ತಿದು. ಬೌದ್ಧಿಕ ಹಾಗೂ ಮಾನಸಿಕ ಪ್ರಬುದ್ಧತೆಯನ್ನು ಸಮಾ–ಸಮಾನಾಗಿ ಸಾಧಿಸಿರುವ ಗಂಡು ಹೆಣ್ಣಿನ ನಡುವೆ  ಹೆಚ್ಚು ಕಡಿಮೆಯ ಅಂತರವನ್ನು ತೊಡೆದು ಹಾಕಲು ಆಗಿದೆಯೇ? ಎಂದು ಚಿಂತಿಸಲು ಸಕಾಲ.
   ಮದುವೆಯಾಗುವುದು, ಮತ್ತೊಬ್ಬರ ಬಾಳ ಸಂಗಾತಿಯಾಗುವುದು ಗಂಡಿನಂತೆ, ಹೆಣ್ಣಿನ ಬದುಕಿನಲ್ಲಿಯೂ ಪ್ರಮುಖ ಘಟ್ಟ. ಹಾಗೆಂದ ಮಾತ್ರಕ್ಕೆ ಹೆಣ್ಣಿನ ವ್ಯಕ್ತಿತ್ವ ಇವುಗಳ ಕಾರಣಕ್ಕಾಗಿ ಕಳೆದುಹೋಗಿ ಬಿಡಬೇಕೆ?. ಮಗಳು, ಹೆಂಡತಿ, ತಾಯಿ ಈ ಮೂರು ಸಂಬಂಧಗಳಲ್ಲಿಯೂ ತನ್ನನ್ನು ತಾನು ಕಂಡುಕೊಳ್ಳುತ್ತಾ, ಸಾಮಾಜಿಕ ಜವಾಬ್ದಾರಿಯನ್ನು ನಿಭಾಯಿಸುತ್ತಲೇ, ತನಗಿರುವ ಪ್ರತಿಭೆಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲವೇ?
      ಹೆಣ್ಣಿಗೆ ಶಿಕ್ಷಣ ಸ್ವಾತಂತ್ರ್ಯ ನೀಡುವುದರ ಹಿಂದೆ ಅವಳ ಪಥವನ್ನು ಅವಳೇ ಕಂಡುಕೊಳ್ಳುವ, ಸ್ವಾವಲಂಬನೆ ಹಾದಿಯ ಸೊಡರು ತಾಕಿ, ಅವಳ ಒಳಬೆಳಗನ್ನು ಹೆಚ್ಚು ಮಾಡುವ ಘನ ಉದ್ದೇಶವಿತ್ತು. ಈ ಉದ್ದೇಶ ಈಡೇರಿದೆಯೇ? ಲಿಂಗತಾರತಮ್ಯಕ್ಕೆ ವಿದ್ಯೆ ಪ್ರಮುಖ ಅಸ್ತ್ರ ಎಂದೇ ಭಾವಿಸಲಾಗಿತ್ತು. ಆದರೆ ಆರಂಭದಲ್ಲಿ ನೀಡಿದ್ದ ಮೇಲಿನ ಮೂರು ದೃಷ್ಟಾಂತಗಳು ಆತ್ಮ ಸ್ವಾತಂತ್ರ್ಯ ಹೆಣ್ಣಿಗೆ ಇಂದಿಗೂ ಮರೀಚಿಕೆಯೇ? ಎಂಬ ಪ್ರಶ್ನೆಯನ್ನು ತಂದೊಡ್ಡುತ್ತದೆ.
   ಹೆಣ್ಣಿಗೆ ರಾಜಕೀಯ ಸ್ವಾತಂತ್ರ್ಯವೆಂಬುದು ಮಾಯಾಜಿಂಕೆಯಾಗಿರುವಾಗ,  ಶಿಕ್ಷಣ ಕೇವಲ ಯೋಗ್ಯ ವರನೊಂದಿಗೆ ಜೋಡಿಯಾಗಲು ಇರುವ ಮಾನದಂಡವೇ?.   ಹೆಣ್ಣಿನ ಪ್ರತಿಭೆ ಕೇವಲ ಕುಟುಂಬಕ್ಕೆ ಸೀಮಿತವಾಗಿಬಿಡಬೇಕು ಎಂಬುದು ಅಪ್ಪಟ ಜಿಡ್ಡಿನ ಮನಸ್ಥಿತಿ. ಇದಕ್ಕೆ ಔಷಧ ಎಲ್ಲಿದೆ?
   ದೇಶದ ಜನಸಂಖ್ಯೆಯಲ್ಲಿ ಅರ್ಧದಷ್ಟು ಮಹಿಳೆಯರೇ ಇದ್ದಾರೆ. ಅವರ ಸಾಮರ್ಥ್ಯಕ್ಕೆ ಅನುಸಾರವಾಗಿ ಉದ್ಯೋಗ ವಲಯವೊಂದನ್ನು ಸೃಷ್ಟಿಸಲು ಸಾಧ್ಯವಿಲ್ಲವೇ?. ಸಾಮಾಜಿಕ ಹಾಗೂ ಕೌಟುಂಬಿಕ ಜವಾಬ್ದಾರಿಯ ನಡುವೆಯೂ ಈ ನೆಲದ ಅಭಿವೃದ್ಧಿಗೆ ತುಡಿಯುವ ಹೆಣ್ಣಿಗೆ ಅವಕಾಶ ಲೋಕವನ್ನು ಸೃಷ್ಟಿ ಮಾಡಬೇಕು.
    ಕೌಟುಂಬಿಕ ಬದುಕಿನಿಂದಾಗಿ ಹೆಣ್ಣು ವೃತ್ತಿ ಬದುಕನ್ನು ಸಮರ್ಪಕವಾಗಿ ನಿಭಾಯಿಸಲು ಸಾಧ್ಯವಿಲ್ಲ ಎಂದು ಸುಖಾಸುಮ್ಮನೆ ಆರೋಪಗಳನ್ನು ಹೊರಿಸಿಬಿಡಲಾಗುತ್ತದೆ. ಹೆಣ್ಣಿನ  ಸ್ವಾವಲಂಬಿತ ವ್ಯಕ್ತಿತ್ವವನ್ನು ಗುರುತಿಸುವ ಸೂಕ್ಷ್ಮ ಮನಸ್ಥಿತಿಯನ್ನು ಸದ್ಯ ಬೆಳೆಸಬೇಕಿದೆ. ಈ ಸೂಕ್ಷ್ಮತೆ ಶಿಕ್ಷಣದಿಂದ ದೊರೆಯತ್ತದೆ ಎಂಬ ಭರವಸೆ ಹುಸಿಯಾಗಿದೆ.
    ಸೆಲ್ಫಿಗೆ ನಿಲುಕದ ಎದೆಯಲ್ಲಿ ಹೆಣ್ಣು ಗಂಡಿನ ಅಸಮಾನತೆಯನ್ನು ಹೇಗೆ ಹೋಗಲಾಡಿಸುತ್ತೀರಿ? ಹಾಗೆಯೇ ಸೆಲ್ಫಿ ಕರೆಗೆ ಓಗೊಟ್ಟವರೆಲ್ಲರೂ ‘ಅವಲಂಬನೆಯ’ ಚೌಕಟ್ಟಿನಿಂದಾಚೆಗೆ ಹೆಣ್ಣಿನ ವ್ಯಕ್ತಿತ್ವವನ್ನು ಕಾಣಬಲ್ಲರೇ?. ಯಾತನಾಮಯ ಬದುಕು ಸವೆಸುತ್ತಿರುವ ವೇಶ್ಯೆಯರಲ್ಲಿ ಹೆಣ್ಣಾಗಿ ಹುಟ್ಟಿದ್ದಕ್ಕೆ ಯಾವ ಹೆಮ್ಮೆಯನ್ನು ಬಿತ್ತುತ್ತೀರಿ?, ನಿತ್ಯ ತಿಪ್ಪೆ ಸೇರುತ್ತಿರುವ  ಹೆಣ್ಣು ಭ್ರೂಣಗಳ ಕಣ್ಣುಗಳಲ್ಲಿ ಅಸ್ಮಿತೆಯ ಬೆಳಕನ್ನು ಹೊತ್ತಿಸುವುದಾದರೂ ಹೇಗೆ? ಅತ್ಯಾಚಾರಕ್ಕೆ ಒಳಗಾದ ಹೆಣ್ಣಲ್ಲಿ ಯಾವ ಬಗೆಯ ಆತ್ಮಸೈರ್ಯ ಮೂಡಿಸಬಲ್ಲಿರಿ?
     ರಾಜಕೀಯದಲ್ಲಿ ಮಹಿಳಾ ಮೀಸಲಾತಿಯ ಕಾಯ್ದೆಯ ಅನುಷ್ಠಾನ ಕುಂಟುತ್ತಾ ಸಾಗಿದೆ. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಅಧ್ಯಕ್ಷೆ ಸ್ಥಾನದಲ್ಲಿರುವ ಹೆಂಡತಿಯ ಕುರ್ಚಿಯಲ್ಲಿ ಗಂಡ ಕೂತು, ಅಧಿಕಾರ ಚಲಾಯಿಸುತ್ತಿದ್ದಾನೆ. ಈ ಬೀದಿಯ ಅತ್ಯಾಚಾರಿ, ಮುಂದಿನ ಬೀದಿಯಲ್ಲಿ ಮದುಮಗನಾಗಿ ಕಂಗೊಳಿಸುತ್ತಿದ್ದಾನೆ. ಆ ಮಟ್ಟಿಗೆ ಕಾನೂನುಗಳು ಸಡಿಲವಾಗಿವೆ.
   ಮನೆಯ ಮಗಳಿಗೆ ಉನ್ನತ ವಿದ್ಯಾಭ್ಯಾಸ ನೀಡಲು ದಾಪುಗಾಲು ಇಡುತ್ತಿದ್ದೇವೆ. ಆದರೆ ಅವಳಿಗೊಂದು ಸ್ವಂತ ವ್ಯಕ್ತಿತ್ವವಿದೆ ಎಂಬುದನ್ನೇ ಮರೆತಿದ್ದೇವೆ. ಸಾರ್ವಜನಿಕವಾಗಿ ಹೆಣ್ಣಿನ ಹಕ್ಕು, ಸ್ವಾತಂತ್ರ್ಯದ ಬಗ್ಗೆ ದನಿ ಏರಿಸುತ್ತಿದ್ದೇವೆ. ಆದರೆ, ಆಂತರ್ಯದಲ್ಲಿ ಅವಳೆಡೆಗೆ ತಾತ್ಸಾರ, ಅಸಮಾಧಾನವನ್ನು ಹುಟ್ಟಿಸಿಕೊಂಡಿದ್ದೇವೆ. ನಡೆಯುತ್ತಿರುವ ಎಲ್ಲಾ ಅನಾಚಾರಕ್ಕೂ ಹೆಣ್ಣು ಹೊರಗೆ ಕಾಲಿಟ್ಟಿದೆ ಕಾರಣ ಎಂದು ಆರೋಪಿಸಿ ತಣ್ಣಗಿದ್ದೇವೆ.
    ಹೆಣ್ಣಿಗಿರುವ ಸ್ವಂತ ವ್ಯಕ್ತಿತ್ವದ ಬಿಂಬಕ್ಕೆ ಈ ‘ಸ್ವಂತಿ’ ಪ್ರತಿಮೆಯಾಗಬೇಕು. ಇಲ್ಲವಾದರೆ,  ನಾಲ್ಕು ಗೋಡೆಗಳ ನಡುವೆ ಆರೋಪಿಸಲ್ಪಟ್ಟ ಅವಳ ವ್ಯಕ್ತಿತ್ವ, ಮುಷ್ಟಿ ಗಾತ್ರದ ಮೊಬೈಲ್‌ನಲ್ಲಿ ಬಂಧಿಯಾಗಿ ಬಿಡುವ ಸಾಧ್ಯತೆಯೇ ಹೆಚ್ಚು.

Sunday, 12 April 2015

ಅವಳ ಹೆಜ್ಜೆ, ಸಬಲೀಕರಣದ ಹಾದಿ ಮತ್ತು ಆಯ್ಕೆ……..


ಬಯಲ ಬೇಗೆಯಲ್ಲಿ ನಿಂತು ಕಿರುಚಾಡುವಾಗ, ಸುಳಿಯದೇ ಸುಳಿಯುವ ಆತ್ಮರತಿ, ತನ್ನದೇ ಅಂಗಳಕ್ಕಿಳಿಯುತ್ತಿದ್ದಂತೆ ಒಡಲ ದಿಕ್ಕನ್ನು ಅರಿವು ಮಾಡಿಕೊಡುವುದಿದ್ದರೆ ಅದು ಅವಳಿಗಷ್ಟೆ….
ಅವಳ ಆಯ್ಕೆಯನ್ನು ನಿರ್ಧರಿಸುವುದು ಯಾರು? ಅವಳೇ…. ಸದ್ದಿಲ್ಲದೇ, ದಿನಕ್ಕೊಂದು ರೂಪ ಪಡೆಯುತ್ತಿರುವ ಸಬಲೀಕರಣದ ಭ್ರೂಣ ಅವಳ ವ್ಯಕ್ತಿಗತ ಆಯ್ಕೆಯ ಅನುಸಾರವೇ ಬೆಳೆಯಬೇಕು. ಬೆಳೆಯುತ್ತಿದೆ ಎಂದನಿಸುತ್ತಿದೆಯೇ?. ಅಷ್ಟಕ್ಕೂ ಈ ಆಯ್ಕೆ ಎಂಬ ಪದವೇ ಬಹು ಸೋಜಿಗ. ಒಬ್ಬರ ಇಷ್ಟಾನಿಷ್ಟ ಮತ್ತೊಬ್ಬರ ಪಟ್ಟಿಯಲ್ಲಿ ಇಲ್ಲದೇ ಹೋಗಬಹುದು. ಮತ್ತೊಬ್ಬರಿಗೆ ಅದು ಆಯ್ಕೆಯಾಗದೇ ಇರಬಹುದು. ಅಂತಹುದ್ದರಲ್ಲಿ ಒಟ್ಟಂದದ ಸಾಮೂದಾಯಿಕ ನೆಲೆಯ ‘ಅವಳ’ ಸಬಲೀಕರಣವನ್ನು’ ಯಾರ ಆಯ್ಕೆ ನಿರ್ಧರಿಸುತ್ತದೆ?
ಇನ್ನೂ ಅವಳೆಂದರೆ… ಅವಳಷ್ಟೆಯೇ…. ಅವಳಲ್ಲಿಯೂ ನಾನಾ ತರಹ. ಮೇಲ್ಮಧ್ಯಮ, ಮಧ್ಯಮ, ಕೆಳ, ಶಿಕ್ಷಿತ, ಅಶಿಕ್ಷಿತ ಹೀಗೆ ನಾನಾ ವರ್ಗೀಕರಣ…ಇದೆಲ್ಲವೂ ಸಾಮಾಜಿಕ ಅಧ್ಯಯನದ ದೃಷ್ಟಿಯಿಂದ..ಇದರಾಚೆಗೆ ಅವಳು ಅವಳೇ. ಆ ಎಲ್ಲ ವ್ಯಕ್ತಿತ್ವವನ್ನು ಗೌರವಿಸುವ ಹಾಗೂ ಪ್ರೀತಿಸುವ ತಿರಸ್ಕರಿಸುವ ಹಕ್ಕು, ಆಯ್ಕೆ ಎಲ್ಲವೂ ಇವನಿಗಿದೆ. ಹಾಗೆಂದ ಮಾತ್ರಕ್ಕೆ ಅವಳು ಯಾರ ಕೈಗೊಂಬೆಯೂ ಅಲ್ಲ. ದೇಹಕ್ಕೂ, ಮನಸ್ಸಿಗೂ ಒಪ್ಪದ ರಾಶಿ ಮೌಲ್ಯಗಳನ್ನು ಅವಳ ಮೇಲೆ ಹೇರಿ, ನಿನ್ನದು ಭೂಮಿ ಸಹನೆ ಎಂಬ ತಥಾಕಥಿತ ಅತಿರೇಕದ ಹೊಗಳಿಕೆಯಿಂದ ಅವಳ ದೇಹ ಹಾಗೂ ಮನಸ್ಸಿನ ಆ ಕ್ಷಣದ ತುರ್ತನ್ನು, ಒಳತೋಟಿಯನ್ನು ನಿವಾರಿಸಲು ಸಾಧ್ಯವೇ?.
ಮೌಲ್ಯಗಳನ್ನು ಹೇರುವಾಗ ಮಾತ್ರ ಅವಳು ದೇವತೆಯಾಗಿಯೂ, ನಿರ್ಣಾಯಕ ಹಂತಗಳಲ್ಲಿ ಅವಳ ಸಾಮರ್ಥ್ಯ, ಕೌಶಲ, ಅಭಿಪ್ರಾಯಗಳನ್ನು ಕಡೆಗಣಿಸುವ ವೈರುಧ್ಯಗಳಲ್ಲಿ ಇವನದ್ದು ಸಂಪೂರ್ಣ ಸೋಲು ಎಂದೆನಿಸವುದಿಲ್ಲವೇ?
ಅನನ್ಯತೆ, ಅಂತಃಕರಣ, ಜೀವಪರತೆಯ ಅವಳ ಶಕ್ತಿಗೆ ಅವಳಷ್ಟೆ ಸಾಟಿ. ಪ್ರಕೃತಿಯ ನಿಗೂಢತ್ವಕ್ಕೆ ಹೋಲಿಸಿ ಸುಮ್ಮನಾಗಬೇಕಷ್ಟೆ.. ‘ಅವಳ’ ಅನನ್ಯತೆಯ ಮುಂದೆ ಎಲ್ಲ ಟೀಕೆಗಳು ಸಪ್ಪೆಯೇ. ಅನಾದಿ ಕಾಲದಿಂದಲೂ ನಡೆದ ಎಲ್ಲ ಆತ್ಮ ಹಾಗೂ ಭಾವ ವಾಗ್ವಾದಲ್ಲಿಯೂ, ಕಾವ್ಯ, ಕತೆ, ನಾಟಕದ ಎಲ್ಲ ಅನುಸಂಧಾನಗಳಲ್ಲೂ ಇದು ವ್ಯಕ್ತವಾಗುತ್ತಲೇ ಇದೆ. ಹಾಗಿದ್ದರೂ, ಅದನ್ನು ಒಪ್ಪಿಕೊಳ್ಳದ ಮನಸ್ಥಿತಿಗೆ ಏನನ್ನೋಣ. ಅಥವಾ ಒಪ್ಪಿಕೊಳ್ಳದೇ ರಚ್ಚೆ ಹಿಡಿಯುತ್ತಿರುವ ಮನಸ್ಥಿತಿಯನ್ನು ಶಿಶು ಮನಸ್ಥಿತಿ ಎಂದು ಕ್ಷಮಿಸಿಬಿಡೋಣವೇ?, ಬಿಟ್ಟುಕೊಟ್ಟು ಬಿಡೋಣವೇ?
ಕೌಟುಂಬಿಕ, ಸಾಮಾಜಿಕ ಹಾಗೂ ಔದ್ಯೋಗಿಕ ಕ್ಷೇತ್ರಗಳೆಂಬ ಕತ್ತಿ ಅಲಗಿನ ನಡುವೆಯೂ ನಾಜೂಕಾಗಿ ನಡೆಯುವ ಅವಳೆಂಬ ಅವಳು ಬಿಟ್ಟಕೊಟ್ಟಿದ್ದೆಷ್ಟು, ಕ್ಷಮಿಸಿದೆಷ್ಟು…? “ನಾನು ನಿನ್ನಂತೆಯೇ ಆತ್ಮ .ಪ್ರತಿ ಸಲ ನಾನೇ ಏಕೆ ಬಿಟ್ಟುಕೊಡಲಿ, ಏಕೆ ಕ್ಷಮಿಸಬೇಕು, ಏಕೆ ಹೊಂದಿಕೊಬೇಕು” ಎಂಬ ಸಣ್ಣ ತಹತಹ ಅವಳಲ್ಲಿ ಹುಟ್ಟಿದರೆ, ಅವಳು ನನ್ನಂತೆಯೇ ಅಲ್ಲವೇ ಎಂದು ಇವನಿಗೇಕೆ ಅನಿಸದು? ಹಾಗೇ ಅನಿಸಿದಾಗಲೂ ಅವನೇಕೆ ಹೇಳನು? ಅನೂಕ್ಷಣ ಅವನ ಅಹಂನ ಬೆಂಕಿಗೆ ಇವಳೇ ಏಕೆ ಕರ್ಪೂರದಂತೆ ಕರಗಬೇಕು?
ಕ್ಷಮಿಸುತ್ತಾ , ಬಿಟ್ಟುಕೊಡುತ್ತಾ ಎಷ್ಟು ದಿನ ಕೂರಲು ಸಾಧ್ಯ. ಆಕೆಗೊಂದು ವೈಯಕ್ತಿಕ ಹಂಬಲವಿರಬಾರದೆ, ಈ ಬದುಕು ಕ್ಷಮಿಸುವುದರಲ್ಲಿಯೇ ಸವೆದು ಹೋಯಿತಲ್ಲ ಎಂಬ ಒಳಬೇಗುದಿಯೊಂದು ಹುಟ್ಟಿದರೆ, ರಿಪೇರಿಯಾಗದ ಸಂಬಂಧದಾಚೆಗೆ ಸಾಂತ್ವನವೋ, ಸಹಚರ್ಯೆಯೋ ಏರ್ಪಟ್ಟರೆ, ಏಕಪಕ್ಷೀಯವಾಗಿ ಜರೆದು ಬಿಡುವುದು ತರವೇ?. ನನ್ನಂತೆ ಅವನಿಗೂ ಬದ್ಧತೆ ಬೇಕು ಎಂದು ಅನಿಸುವುದು ತಪ್ಪಲ್ಲವಲ್ಲ. ಆದರೆ ಅವಳೆಂಬ ಒಂದೇ ಕಾರಣಕ್ಕೆ, ಮನೋವ್ಯಾಪಾರದ ವ್ಯಾಖ್ಯಾನವನ್ನು ಬೇಕಾದ ಹಾಗೇ ತಿರುಚುವುದು ಸರಿಯೆನಿಸುತ್ತದೆಯೇ?. ಯಾರೋ ಸಿದ್ಧಪಡಿಸಿದ ಭೂತದ ಕನ್ನಡಿಯಲ್ಲಿ ವರ್ತಮಾನದ ಅವಳು ಸಮರ್ಪಕವಾಗಿ ಕಾಣಬಲ್ಲಳೆ?
ಇನ್ನೂ ರಾಜಕೀಯ, ಸೈದ್ಧಾಂತಿಕ ವಿಚಾರದಲ್ಲಿ ಆಯ್ಕೆಗಳೇನೋ ಸರಿ. ಆದರೆ, ಹೇಳಿ ಕೇಳಿ ಸಂಬಂಧಗಳೇ ಬಹು ಸೂಕ್ಷ್ಮ. ಅವುಗಳಲ್ಲಿ ಆಯ್ಕೆ ಎನ್ನುವ ಪದವೇ ಸರಿಯಲ್ಲ. ಸಂಬಂಧವನ್ನು ಆಯ್ಕೆ ಮಾಡುವ ಹಕ್ಕು ಸ್ವಾತಂತ್ರ್ಯ ಇಬ್ಬರಿಗೂ ಇದೆ.. ಆದರೆ, ಅದರಲ್ಲಿ ಬದ್ಧತೆಯೆಂಬುದು ಕೂಡ ಇರಬೇಕಾಗುತ್ತದೆ. ಹಾಗಿಲ್ಲದೇ ಹೋದರೆ ಆಯ್ಕೆ ಪದ ಲೆಕ್ಕಚಾರದ ಮನಸ್ಥಿತಿಗೆ ತೀರಾ ಹತ್ತಿರವೆನಿಸಿಬಿಡುತ್ತದೆ. .
ಬದ್ಧತೆಯೇ ಮುಖ್ಯವಾದಾಗ ಉಳಿದೆಲ್ಲವೂ ಗೌಣವಾಗುತ್ತದೆ. ಆಯ್ಕೆ ಮೇಲೆ ನಿಂತದ್ದು, ಬಹುಕಾಲ ಬಾಳದು. ಆಯ್ಕೆಯನ್ನೇ ಮುಖ್ಯವಾಗಿಸುತ್ತಾ, ಅರಸುತ್ತಾ ಹೊರಟರೆ… ಇಷ್ಟಪಟ್ಟದ್ದನ್ನೇ ಧೇನಿಸಿ, ಹವಣಿಸಿ ಪಡೆಯುವುದರ ಸವಿ ಏನಿದೆ? ಪಡೆದ ಮೇಲೆ ಉಳಿಸಿಕೊಳ್ಳುವ ಹಂಬಲವಿಲ್ಲದೇ ಹೋದರೆ ಬದುಕು ಅತಿ ಕ್ಷಣಿಕ ಎಂದು ಅನಿಸುವುದಿಲ್ಲವೇ?. ಈ ಮಾತು ಇವನಿಗಾಗಲಿ, ಇವಳಿಗಾಗಲಿ ಒಂದೇ ಅಲ್ಲವೇ?
ಸಬಲೀಕರಣವೆಂಬ ಪದ ಅವಳ ದೇಹಕ್ಕಿಂತಲೂ ಮನಸ್ಸಿಗೆ ಸಂಬಂಧಿಸಿದ್ದು. ಈ ಸಬಲೀಕರಣವೆಂಬ ಪದವನ್ನು ಅವಕಾಶವಾದಿಗಳ, ಸ್ವಾರ್ಥಿಗಳ, ಬಿಟ್ಟಿ ಪ್ರಚಾರ ಬಯಸುವವರಿಂದ, ಯಾವ್ಯಾವೊದೋ ಸೋಗಿನಲ್ಲಿರುವವರಿಂದ ರಕ್ಷಿಸಬೇಕಿದೆ. ಹಾಗೇ ರಕ್ಷಿಸದೇ ಹೋದರೆ, ಬದುಕು, ಅಸ್ಮಿತೆ ಎಂದು ತುದಿಗಾಲಿನಲ್ಲಿ ನಿಂತು ದುಡಿಯುತ್ತಿರುವವಳ, ಎಲ್ಲ ನೋವ ನುಂಗಿ, ತುದಿ ಸೆರಗಿನಲ್ಲಿ, ಕಣ್ಣಹನಿಯ ಒರೆಸಿಕೊಂಡವಳ ಸಬಲೀಕರಣ, ಕ್ಲೀಷೆಯಾಗಿಯೂ, ನಗೆ,ಪಾಟಲಿಗೀಡಾಗುವ ಸಾಧ್ಯತೆಯೇ ಹೆಚ್ಚಲ್ಲವೇ?
ಇನ್ನೂ ಅವಳ ಶಕ್ತಿ, ಸಾಮರ್ಥ್ಯ ಅವಳಿಗೆ ತಿಳಿಯುವಂತೆ ಮಾಡುವ ಪ್ರಯತ್ನದಲ್ಲಿ ದಾಪುಗಾಲು ಇಡಬೇಕಿದೆ. ಅದರಲ್ಲೂ
ಕೆಳ ಹಾಗೂ ಮಧ್ಯಮ ವರ್ಗದಲ್ಲಿ ಬಹುದೊಡ್ಡ ಪರಿವರ್ತನೆ ಮಾಡಬೇಕಿದೆ. ಇದು ಅವನ ಬೆಂಬಲವಿಲ್ಲದೇ ಅಸಾಧ್ಯ. ಪರಂಪರೆಯ ಲೆಕ್ಕಚಾರದಲ್ಲಿ ಅವಳ ಮೇಲೆ ಬರೀ ಆದರ್ಶಗಳನ್ನಷ್ಟೇ ಹೇರಿದರೆ, ಪ್ರಾಯೋಗಿಕವಾಗಿ ಆಕೆ ಬದುಕು ಕಂಡುಕೊಳ್ಳುವುದಾದರೂ ಹೇಗೆ? ದೇಶಕ್ಕೆ ಸ್ವಾತಂತ್ರ್ಯ ಬಂದು 60ವರ್ಷಗಳೇ ಕಳೆದಿವೆ. ಹೀಗಿದ್ದೂ ಅವಳು ಇನ್ನೂ ಸಾಮಾಜಿಕ,ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯ ಸಮಾನತೆಗಳನ್ನೇ ಸಾಧಿಸಲು ಸಾಧ್ಯವಾಗದೇ ಇರುವಾಗ, ನನ್ನಾಯ್ಕೆ ಎಂಬ ಬೀಸು ಹೇಳಿಕೆ ಅವಳ ಅಂತಃಸತ್ವಕ್ಕೆ ಮಾರ್ಗದರ್ಶನ ಮಾಡಬಲ್ಲದೆಯೇ?
ಬೌದ್ಧಿಕ, ಸೈದ್ದಾಂತಿಕ, ಪಕ್ಷ ಒತ್ತಟ್ಟಿಗಿರಲಿ, ಕನಿಷ್ಠ ಕೂಲಿ ಪ್ರಜ್ಞೆಯೂ ಇಲ್ಲದೇ ದುಡಿಯುತ್ತಿರುವ ಮಧ್ಯಮ ಹಾಗೂ ಕೆಳವರ್ಗದ ಅವಳ ಬದುಕಿಗೆ ಯಾವ ಆಯ್ಕೆಯಿದೆ?. ಹಾಗೆಯೇ ಮಧ್ಯಮ ವರ್ಗದ ಅವಳು ಬದುಕನ್ನು ಮಟ್ಟಸಗೊಳಿಸುವ, ಒಪ್ಪ ಓರಣಗೊಳಿಸುವ, ಕುಟುಂಬವನ್ನು ಪೋಷಿಸುವ ಆಯ್ಕೆಯಲ್ಲಿ ಅವಳಿಲ್ಲದೇ ಹೋಗಬಹುದು. ಆದರೆ ಅವಳ ಅನನ್ಯತೆ?
ಅವಳ ದೇಹ, ಅವಳ ಬದುಕು ಅದು ಅವಳದ್ದೇ. ಇದನ್ನೇ ಅಲ್ಲವೇ “ಮೈ ಚಾಯ್ಸ್’ ಎಂಬ ವಿಡಿಯೋದಲ್ಲಿ ನಟಿ ದೀಪಿಕಾ ಕೂಡ ಹೇಳಿದ್ದು. ಆದರೆ ಆಕೆ ಹೇಳದೇ ಉಳಿದ ಬಹುದೊಡ್ಡ ಮಾತೆಂದರೆ…. ಅವಳ ದೇಹ, ಅವಳು ಬದುಕು ಎಲ್ಲವೂ ಅವಳದ್ದೇ. ಆದರೆ ಅದು ಬಿಕರಿಗಿಟ್ಟ ವಸ್ತುವಲ್ಲ. . ಬಿಕಾರಿಗಳಿಗೆ ಹಣ ಮಾಡಲು ಇರುವ ಬಂಡವಾಳವೂ ಅಲ್ಲ. ಇದನ್ನ ದೀಪಿಕಾ ಎಂಬ ನಟಿ ಹೇಳಲು ಮರೆತಿದ್ದಾಳೆ. ಹೇಳುವ ವೇದಿಕೆಯೂ ಅದಲ್ಲವಲ್ಲ. ಹೇಳುವ ಸ್ವಾತಂತ್ರ್ಯವೂ ಆಕೆಗಿಲ್ಲ. ಏಕೆಂದರೆ ಆ ವಿಡಿಯೊ, ಜಾಹೀರಾತಿನ ಒಂದು ತುಣುಕಿನಂತೆ. ಇನ್ನೂ ಜಾಹೀರಾತು ಕ್ಷೇತ್ರ ಭೋಗ ಸಂಸ್ಕೃತಿಯ ಮೇಲೆ ನಿಂತಿದೆ.
ವಿಡಿಯೋದಲ್ಲಿ ಹೇಳಿರುವಂತೆ: ದೇಹವನ್ನು ಜಿರೋ ಸೈಜ್ ಗೋ, ಅಥವಾ ಇನ್ನಾವೊದೋ ಸೈಜೊಗೋ ತರುವುದು ಅವಳ ಇಷ್ಟ. ಈ ಒಂದು ಅಂಶದಲ್ಲಿಯಾದರೂ ಅದನ್ನು ಪ್ರತಿಪಾದಿಸಿದ ದೀಪಿಕಾಗೆ ಆಯ್ಕೆಯಿದೆಯೇ? ಖಂಡಿತಾ ಇಲ್ಲ.. ಮುಂದಿನ ಸಿನಿಮಾಗಳಲ್ಲಿ ಸಿಗುವ ಪಾತ್ರದ ಆಧಾರದ ಮೇಲೆ ಆಕೆಯ ದೇಹದ ತೂಕ ನಿರ್ಧಾರವಾಗುತ್ತದೆ. ಅದು ನಿರ್ದೇಶನಕನೊಬ್ಬ ಅಣತಿಯ ಮೇರೆಗೆ!
ಯಕಃಶ್ಚಿತ್ ಎರಡೂವರೆ ನಿಮಿಷದ ವಿಡಿಯೋದಿಂದಲೋ, ಗೊಡ್ಡು ಭಾಷಣದಿಂದಲೋ, ಕ್ಯಾಮೆರಾದ ಮುಂದಿನ ‘ನಾಟಕದಿಂದಲೋ’ ಮಹಿಳಾ ಸಬಲೀಕರಣ ಸಾಧ್ಯವಿಲ್ಲ. ಅದು ನಿಂತ ನೆಲದಲ್ಲೇ ಆಗಿ ಬಿಡುವ ಕ್ರಿಯೆಯೂ ಅಲ್ಲ. ಸಬಲೀಕರಣಕ್ಕಾಗಿ ತುಡಿಯುವ ಸಾವಿರಾರು ಚೇತನಗಳು ತಾವು ಸಾಗುತ್ತ. ಇತರರ ಹೆಜ್ಜೆಗೂ ಅವಕಾಶ ಕೊಡುತ್ತಾ ಅವಳ ದಾರಿಯನ್ನು ಸುಗಮಗೊಳಿಸುವುದಾಗಿದೆ.
ಆಯ್ಕೆಯ ದನಿ ಎಲ್ಲರಿಗೂ ಇರಬೇಕು. ಆದರೆ ಅದನ್ನು ಎಂತಹ ಸನ್ನಿವೇಶದಲ್ಲಿ ಏರಿಸಬೇಕು ಎಂಬ ಕನಿಷ್ಠ ಪ್ರಜ್ಞೆ, ವಿವೇಕವಿಲ್ಲದೇ ಹೋದರೆ ಯಾವ ಸ್ವಾತಂತ್ರ್ಯವೂ ಅವಳನ್ನು ಕಾಪಾಡದು.
ಆಧುನೀಕತೆಯೆಂಬುದು ಉಟ್ಟ ಉಡುಗೆಯಲ್ಲಿ ಇಲ್ಲ. ನೆಟ್ಟ ದೃಷ್ಟಿಯಲ್ಲಿರುತ್ತದೆ. ಮುಕ್ತತೆ ಲೈಂಗಿಕತೆಗಷ್ಟೆ ಸಂಬಂಧಿಸಿದ್ದಾಗಿರಬೇಕಿಲ್ಲ. ಮೂರು ಕಾಸಿನವರು ಹೇರಿದ ತಥಾಕಥಿತ ಮೌಲ್ಯಗಳಿಂದ ಅವಳು ಸದ್ಯ ಮುಕ್ತಳಾಗಬೇಕಿದೆ. ಸುಳಿವಾತ್ಮ ಗಂಡೂ, ಅಲ್ಲ ಹೆಣ್ಣೂ ಅಲ್ಲ ಎಂಬುದು ಅವನಂತೆಯೇ, ಅವಳಲ್ಲೂ ಬಿತ್ತಬೇಕಿದೆ.. ಇಡೀ ಜನಸಂಖ್ಯೆಯ ಅರ್ಧದಷ್ಟಿರುವ ಅವಳು ವೈಯಕ್ತಿಕ ಮೌಲ್ಯವನ್ನು ಪ್ರತಿಪಾದಿಸುವಷ್ಟು ತಾಕತ್ತು ಹೊಂದಿದ್ದಾಳೆ. ಈ ನೆಲದ ಅಭಿವೃದ್ಧಿಗೆ ಅವಳ ಶಕ್ತಿ ಸಾಮರ್ಥ್ಯ, ಕೌಶಲವನ್ನು ಬಳಸಿಕೊಳ್ಳುವ ತುರ್ತಿದೆ ಎಂದು ಅನಿಸಿ, ಕಾರ್ಯರೂಪಕ್ಕೆ ಬಂದಾಗಷ್ಟೆ ಅವಳ ಸಬಲೀಕರಣ. ಈ ನೆಲದ ಉದ್ಧಾರ. ಇದು ಎಲ್ಲ ಕ್ಷೇತ್ರಗಳಿಗೂ ಅನ್ವಯ,
ಅವಳ ಅಂತಃಸತ್ವ, ಅನನ್ಯತೆ, ಅವಳ ವ್ಯಕ್ತಿತ್ವ ಅವಳದ್ದು. ಅದನ್ನು ಪ್ರತಿಪಾದಿಸಲು ಯಾವ ವಾದದ ಊರುಗೋಲು ಬೇಡ. ಪರಂಪರೆ ಹೇರಿರುವಂತೆ, ಪ್ರಗತಿಪರ ದೃಷ್ಟಿಕೋನವು ಒಂದಷ್ಟು ಇಲ್ಲದ ಸಲ್ಲದ, ವ್ಯಾಖ್ಯಾನವನ್ನು ಅವಳ ಮೇಲೆ ಹೇರಿದೆ. ಪೂರ್ವ ಮತ್ತು ಪಶ್ಚಿಮಗಳಾಚೆಗೆ ಇರುವ ಅವಳ ಸಂಕಟ ದೊಡ್ಡದು. ಇರುವ ಸವಾಲುಗಳನ್ನೇ ಅವಕಾಶವಾಗಿ ಪರಿವರ್ತಿಸುವ ಅವಳ ಚಾಕಚಕ್ಯತೆಯೇ ಅವಳ ಆಸ್ತಿ. ಅವಳ ಅನನ್ಯತೆಯೇ ಅವಳನ್ನು ಕೈಹಿಡಿದು ಮುನ್ನಡೆಸುತ್ತದೆ.
ಆದರೆ, ಅವಳು ಮತ್ತು ಅವನ ಸಾಂಗತ್ಯ, ಪರಸ್ಪರ ಸಹಕಾರ ಇವೆಲ್ಲದಕ್ಕೂ ಮೀರಿದ್ದು, ಪದಗಳಿಗೂ ನಿಲುಕದ್ದು......


Sunday, 22 March 2015

ನಿವೇದನೆಯ ಭಿನ್ನತೆಯೂ, ನಿರೂಪಣೆಯ ಆಪ್ತತೆಯೂ….






 ಮನೋ ಸಾಗರದಲ್ಲಿ ಸದಾ ಭರತ- ಇಳಿತ. ಹುಟ್ಟಿದಾರಭ್ಯದಿಂದಲೂ ಅಂಟಿಕೊಂಡ ಶ್ರೇಷ್ಠತೆಯ ವ್ಯಸನ ಮನುಷ್ಯನಿಗಷ್ಟೇ ಲಭ್ಯ ಇದಕ್ಕೆ ಜಾತಿ, ಬಣ್ಣ, ಧರ್ಮ, ಲಿಂಗ ಹಾಗೂ ವೃತ್ತಿ ಎಂಬ ಪದಗಳು ಕೇವಲ ನಿಮಿತ್ತ ಮಾತ್ರ. ಇವುಗಳ ಸುತ್ತ  ಮೇಲು-ಕೀಳಿನ ಕಲ್ಪನೆಗಳು ಸುಳಿದಾಡದೇ ಹೋದರೆ, ಈ ಎಲ್ಲ ಪದಗಳು ನಿರ್ಜೀವವೇ ಸರಿ.
ಎಲ್ಲೆಲ್ಲಿ ಮನುಷ್ಯ ಎಂಬ ಪ್ರಾಣಿ ಹೆಜ್ಜೆ ಊರಿದ್ದಾನೋ, ಭಾಗಗಳಲ್ಲಿ ಯಾವುದೋ ರೂಪದಲ್ಲಿಯಾದರೂ ಮಹಾನ್ ಕಂದಕಗಳು, ಕುಳಿಗಳು ಬಿದ್ದಿವೆ. ಇದನ್ನು ಕೇವಲ ಸಾಮಾಜಿಕ ನೆಲೆಯಲ್ಲಷ್ಟೇ ನೋಡದೇ, ಮನಃಶಾಸ್ತ್ರೀಯ ದೃಷ್ಟಿಕೋನದಿಂದ ಕಂಡಾಗಷ್ಟೇ  ಧ್ರುವೀಕರಣಗೊಳ್ಳದ ಸತ್ಯಗಳು ಬಯಲಾಗುತ್ತವೆ. ಆಗಷ್ಟೆ ಆಂತರ್ಯದ ಅರಿವನ್ನು ಆಗುಮಾಡಿಕೊಳ್ಳಬಹುದು.  ಇವುಗಳ ಸತತ ಅನ್ವೇಷಣೆಯಿಂದ, ತಥಾಕಥಿತ ಸಂಶೋಧನೆಯ ಉತ್ತರಗಳು ದೊರೆಯದೇ ಹೋಗಬಹುದು. ಆದರೆ, ಈ ಅನ್ವೇಷಣೆ ನಮ್ಮೊಳಗೆ ನಿಜವಾದ ಅರಿವನ್ನು, ಅಂತಃಸತ್ವವನ್ನು ಉಂಟುಮಾಡುತ್ತದೆ.

ಜಾತಿ ಹಾಗೂ ಬಣ್ಣ  ಹುಟ್ಟಿಸಿದ ತಾತ್ಸಾರ, ಒಳತೋಟಿ ದೊಡ್ಡದು. ಜಾತಿ ಹಾಗೂ ಬಣ್ಣದ ವ್ಯಾಖ್ಯಾನ ಸಾಂಸ್ಕೃತಿಕ ಚಹರೆಯಲ್ಲಿ ಸೇರಿಹೋಗಿದೆ.ಇದು ಸಂಸ್ಕೃತಿಯ ನೀರಿನಲ್ಲಿ ಮಲಿನತೆಯ ರೂಪಕವಾಗಿ ಸೇರಿ ಹಲವು ಶತಮಾನಗಳೇ ಕಳೆದಿವೆ. ಮನುಷ್ಯ ತನಗೆ ತಾನೇ ಹೆಣೆದುಕೊಂಡ ನೂರಾರು ಮುಖವಾಡದೊಳಗೆ ಒಮ್ಮೆ ಇಣುಕುವಂತಾದರೆ, ಹಾಗೇ ಇಣುಕಲು, ನಮ್ಮ  ಸ್ವೋಪಜ್ಞತೆ ಅವಕಾಶ ಮಾಡಿಕೊಟ್ಟರೆ. ಅದೇ ಅಕ್ಷರದ ಬಹುದೊಡ್ಡ ಸಾರ್ಥಕತೆ.

ಈಚೆಗೆ ಬಿಡುಗಡೆಯಾದ ಸಂತೋಷ ಗುಡ್ಡಿಯಂಗಡಿ ಅವರ ಮೊದಲ ಕಥಾ ಸಂಕಲನ ಕೊರಬಾಡು ಅಪಾರ ಕಥಾ ಎಳೆಗಳನ್ನು ಓದುಗರ ಮುಂದಿಡುತ್ತದೆ. ಹಾಗೇಯೇ ಜಾತಿ, ವರ್ಗ ಹಾಗೂ ಬಣ್ಣ ಸಂಘರ್ಷದ ಅಮಾನವೀಯ ಮುಖವನ್ನು ತೆರೆದಿಡುತ್ತದೆ. ಕುಂದಾಪ್ರದ ವರಾಹಿ ನದಿ ತೀರದಿಂದ ನಂಜನಗೂಡಿನ ಕಪಿಲಾ ನದಿ ತೀರದವರೆಗೆ ಕಂಡ ನೂರಾರು ಪಾತ್ರಗಳು ಬಹಳ ಸೊಗಸಾಗಿ ಮಾತನಾಡುತ್ತವೆ.  ಹುಟ್ಟಿದ ಹಾಗೂ ಬದುಕು ಕೊಟ್ಟ ನೆಲದ ಸಾಂಸ್ಕೃತಿಕ ಚೈತನ್ಯದ ವಿನ್ಯಾಸವನ್ನು ಅದಿರುವ ಹಾಗೇ ಗ್ರಹಿಸಿ, ಅದರಲ್ಲಿ ಕಥೆಯನ್ನು ಮಥಿಸುವುದು ಅಷ್ಟು ಸುಲಭದ ಸಂಗತಿಯಲ್ಲ.ಅದಕ್ಕೆ ಸೂಕ್ಮ ಸಂವೇದನೆ ಅತ್ಯಗತ್ಯ. ಅದನ್ನು ಸಂತೋಷ ಗುಡ್ಡಿಯಂಗಡಿ ಅವರು ಬಹಳ ಸಲೀಸೆಂಬಂತೆ ಪ್ರಸ್ತುತ ಪಡಿಸಿದ್ದಾರೆ.

ಕುಂದಾಪ್ರ ನೆಲದಲ್ಲಿ ಹುಟ್ಟಿ, ವೃತ್ತಿಯ ಸಲುವಾಗಿ ನಂಜನಗೂಡಿನಲ್ಲಿದ್ದರೂ ಎರಡು ಪ್ರದೇಶಗಳ ಭಾಷೆ, ಸಂಸ್ಕೃತಿ, ಜನರ ಬದುಕು, ಬವಣೆಗಳನ್ನು ಒಳಗಣ್ಣಿನಿಂದ ನೋಡಲು ಸಾಧ್ಯವಾಗಿರುವುದರಿಂದಲೋ ಏನೋ, ಭಾಷೆಯ ಹಂಗಿಲ್ಲದೇ ಅವರ ಕತೆಗಳು ಇಷ್ಟವಾಗುತ್ತ ಹೋಗುತ್ತದೆ. ಕುಂದಾಪ್ರ ಕನ್ನಡ ಹಾಗೂ ನಂಜನಗೂಡಿನ ಗ್ರಾಮ್ಯ ಭಾಷೆಗಳೆರಡು ಇಲ್ಲಿ ಮಾತಾಗಿವೆ. ಅವು ಗ್ರಾಮ್ಯಕ್ಕಿರುವ ಮಿತಿಯನ್ನು ಮೀರಿ, ಓದಿಸಿಕೊಂಡು ಹೋಗುವ ಗುಣವನ್ನು ಸಹಜವಾಗಿಯೇ ಪಡೆದುಕೊಂಡಿವೆ ಎನ್ನಲು ಅಡ್ಡಿಯಿಲ್ಲ.

ಸಂತೋಷ ಗುಡ್ಡಿಯಂಗಡಿ ಅವರು ಮೇಷ್ಟ್ರಾಗಿರುವುದರಿಂದಲೇನೋ ಮಕ್ಕಳನ್ನು ಮೆಲು ಮಾತಿನಿಂದ, ಮಾತನಾಡಿಸಿ, ಕಲಿಸುವಂತೆ, ಸುತ್ತಮುತ್ತ ನಡೆಯುವ ಸೂಕ್ಷ್ಮ ಸಂಗತಿಗಳನ್ನು ತಟ್ಟಿ  ಮಾತನಾಡಿಸಿ, ಪಾತ್ರವಾಗಿಸಿದ್ದಾರೆ. ಅವರ ಕಥಾ ವಸ್ತುವಿನ ಹುಡುಕಾಟಗಳೆಲ್ಲವೂ, ಅಕ್ಷರ ಅಷ್ಟಾಗಿ ಹತ್ತದ ಕೊನೆಯ ಬೆಂಚಿನ ಹಿಂದುಳಿದ ಹುಡುಗರ ಕುರಿತದ್ದೇ ಆಗಿದೆ. ಕತೆಯ ,ಪಾತ್ರಗಳೆಲ್ಲವೂ ದೀನ ದಲಿತರು, ನಿರ್ಗತಿಕರು ಹಾಗೂ ಅಸಹಾಯಕರ ಸುತ್ತವೇ ಹೆಣೆಯಲಾಗಿದೆ ಎಂಬುದು ಇಲ್ಲಿನ ವೈಶಿಷ್ಯ.

ದುರ್ಗಿ, ಕೊರ್ಗು, ದೇವಿ ಈ ಎಲ್ಲ ಪಾತ್ರಗಳು ಗಟ್ಟಿ ವ್ಯಕ್ತಿತ್ವದ ಪಾತ್ರಗಳಾಗಿಯೇ ಹೊಮ್ಮಿವೆ. ಅಷ್ಟೆಕೇ ಕಥಾ ಸಂಕಲನದ ಅಷ್ಟೂ ಕತೆಗಳಲ್ಲಿ ಬರುವ ಹೆಣ್ಣಿನ ಪಾತ್ರಗಳು ದಿಟ್ಟತನದ ಪ್ರತೀಕ. ಹೆಂಗರುಳಿನ ಸಂತೋಷ ಅವರು ಕತೆಗಾರನಾಗಿ ಸೃಷ್ಟಿಸಿದ ಈ ಎಲ್ಲ ಪಾತ್ರಗಳು ಗಟ್ಟಿ ವ್ಯಕ್ತಿತ್ವದ ಬಿಂಬಗಳು,  ಬದುಕು ಪ್ರೀತಿಸಿದ ಬಡವರ ಮಕ್ಕಳು ಹಾಗೂ ಸುಂದರಿಯ ಕಾಟ ಕತೆಗಳು ಒಟ್ಟು ಅತಾರ್ಕಿಕ ವ್ಯವಸ್ಥೆಯೆಡೆಗಿನ ಮುಗ್ಧ ಪ್ರಶ್ನೆಗಳಿಂದಲೇ ಸೆಳೆಯುತ್ತದೆ. ದುರ್ಗಿ ಮಗ ದಿಲ್ಲಿಗ್ಹೋಯ್ಬಂದ ಕತೆಯ ಶೀರ್ಷಿಕೆಯು ನೆರೆಮನೆಯ ಹೆಂಗಸರೆಲ್ಲ ಬಾವಿ ಕಟ್ಟೆಯಲ್ಲಿ ಸಹಜವಾಗಿ ಆಡಬಹುದಾದ ಮಾತನ್ನೇ ಶೀರ್ಷಿಕೆಯಾಗಿಸಿ, ಅಲ್ಲಿಯೇ ಒಂದು ಕತೆಯ ಹೃಸ್ವವನ್ನು ಹುಟ್ಟುಹಾಕಿದ್ದಾರೆ.

ಗುಡ್ಡಿಯಂಗಡಿ ಅವರ ಬಹುತೇಕ ಕತೆಗಳಲ್ಲಿ ಕಾವ್ಯ ಕಥನದ ಮಾದರಿಯಿದೆ. ಕತೆಗಳನ್ನು ಓದುತ್ತಿರುವಾಗಲೇ ಕಾವ್ಯದ ಲಹರಿಯೊಂದು ಓದುಗರ ಹಿಡಿತಕ್ಕೆ ದಕ್ಕುವಂತೆ ಭಾಸವಾಗುತ್ತದೆ. ಆದರೆ ಕತೆಗಳನ್ನು ನಾಟಕೀಯ ನೆಲೆಯಲ್ಲಿಯೇ ಆರಂಭಿಸುವ ಅಥವಾ ಸಮಾಪ್ತಿಗೊಳಿಸುವ ಉಮೇದು ಸಂತೋಷ ಅವರಲ್ಲಿ ತುಸು ಹೆಚ್ಚೇ ಎನ್ನುವಂತಿದೆ.  

ಅಜ್ಜಿ ಅಂಗಡಿ ಕತೆಯಲ್ಲಿ ಬರುವ ಚಿಕ್ತಾಯಮ್ಮನ ಪಾತ್ರವೂ ಸಾಕವ್ವ ಪಾತ್ರದ ದೂರದ ಸಂಬಂಧಿಯೆನುವಷ್ಟರ ಮಟ್ಟಿಗೆ ಆಪ್ತವಾಗುತ್ತದೆ.  ದೇವನೂರ ಮಹಾದೇವ ಅವರ ಪ್ರಭಾವಕ್ಕೆ ತೀವ್ರತರದಲ್ಲಿ ಒಳಗಾಗಿದ್ದರೂ, ಸ್ವಂತಿಕೆಯಲ್ಲಿಯೂ, ನಿರೂಪಣೆಯಲ್ಲಿಯೂ, ಕತೆಯನ್ನು ನಿವೇದಿಸಿಕೊಳ್ಳುವುದರಲ್ಲಿಯೂ ಭಿನ್ನವಾಗಿ ನಿಲ್ಲುವ ಮೂಲಕ ಕತೆಗಾರನಾಗಿ ಓದುಗರಿಗೆ ಹತ್ತಿರವಾಗುತ್ತಾರೆ.

ಕುಂದ್ರಾಪ ನೆಲದಲ್ಲಿನ ಸಾಂಸ್ಕೃತಿಕ ವಿನ್ಯಾಸಕ್ಕೆ ಮೆರುಗು ತಂದ ಭೂತಾರಾಧನೆ, ದೈವಾರಾಧನೆ, ಅದು ಹುದುಗಿಸಿಟ್ಟುಕೊಂಡ ಜಾತಿ ಹಾಗೂ ವರ್ಗ ತರತಮಗಳನ್ನು ಬಿಚ್ಚಿಡುತ್ತಲೇ, ಅದರ ಸುತ್ತವೇ ಕತೆ ಹೆಣೆಯುವ ಮಟ್ಟಿಗೆ ಅವರ ಸೃಜನಶೀಲತೆ ಪಕ್ವವಾಗಿರುವುದನ್ನು ಮೊದಲ ಸಂಕಲನದಲ್ಲಿಯೇ ಕಾಣಬಹುದು.

ಜಾಗತೀಕರಣದ ಪ್ರಭಾವದಿಂದಾಗಿ ಬದಲಾದ ಕಾಲಘಟ್ಟದಲ್ಲಿ ನಾವಿದ್ದೇವೆ. ವಿದ್ಯೆ ಹಾಗೂ ಉದ್ಯೋಗದಿಂದಾದ ಬದಲಾವಣೆಯ ಬೀಸುಗಾಳಿ ಹಳ್ಳಿಗಳನ್ನು ತಲುಪಿ ಹಲವು ವರುಷಗಳೇ ಸಂದಿವೆ. ಅದು ಸೃಷ್ಟಿಸಿದ ಬದಲಾವಣೆ, ತಲ್ಲಣ ಬೇರೆ ಬೇರೆ ಸ್ವರೂಪ ಪಡೆದು, ಹೊಸ ಕಥಾ ಲೋಕವನ್ನು ತೆರೆದಿಟ್ಟಿದೆ. ಈ ಬದಲಾವಣೆ, ತಲ್ಲಣಗಳ ಜಾಡು ಹಿಡಿದು ಕತೆಯಾಗಿಸಲು ಸದ್ಯ ಸೋತಿರುವ ಕತೆಗಾರ, ಮುಂದಿನ ಪ್ರಯತ್ನದಲ್ಲಿ ಗೆಲ್ಲಲಿ.,


Saturday, 7 March 2015

ಹೆಣ್ಣೆಂಬ ಆತ್ಮದ ಅಂತರ್ದೃಷ್ಟಿ.....






ಅರುಣಿಮಾ ಸಿನ್ಹಾ

 ಆಕೆಯ  ಕಣ್ಣುಗಳಲ್ಲಿ ಅಡಗಿದ್ದ ಕಿಡಿ, ಹೋರಾಟದ ಕೆಚ್ಚು. ಅವು ಮಾತಾಗಿ ಹೊಮ್ಮಿ, ಕೇಳುಗರ ಎದೆಯಲ್ಲಿ ಹಣತೆಯೊಂದನ್ನು ಬೆಳಗಿದರೆ ಆಶ್ಚರ್ಯವಿಲ್ಲ. ಸಾಧನೆಗೆ ಯಾವುದೇ ಮಿತಿಯಿಲ್ಲ. ಮನಸ್ಸಿಗೆ ಹಾಕಿಕೊಂಡ ಮಿತಿಗಳನ್ನ ಆಯಾ ಕಾಲಕ್ಕೆ ತಕ್ಕಂತೆ ಕೊಡವಿಕೊಳ್ಳಬೇಕು. ಹಾಗೇ ಕೊಡವಿಕೊಳ್ಳುವುದು ಬದುಕುವ ಮಾರ್ಗಗಳಲ್ಲಿ ಒಂದು ಎಂಬುದನ್ನು ತೋರಿಸಿಕೊಟ್ಟವರಲ್ಲಿ ಹಲವರಿದ್ದಾರೆ. ಆದರೆ, ಈಕೆ ಆರಿಸಿಕೊಂಡಿದ್ದು ಮಾತ್ರ ದುರ್ಗಮದ ಹಾದಿ. ಸೃಷ್ಟಿಸಿಕೊಂಡಿದ್ದು, ಅನುಕ್ಷಣವೂ ಆತ್ಮಬಲವನ್ನು ಕುಗ್ಗಲು ಬಿಡದೇ, ಮುನ್ನಡೆಯಬೇಕಾದ ತುರ್ತು. ಮನಸ್ಸು ಅರಳಲು ತುರ್ತೊಂದು ಹುಟ್ಟದೇ ಹೋದರೆ, ಅದು ಮಿತಿಯಲ್ಲಿಯೇ ಉಳಿದು ಹೋಗುವ ಆತಂಕವನ್ನು ಉಳಿಸಿಕೊಂಡು ಬಿಡುತ್ತದೆ.
ಬದುಕಿನುದ್ದಕ್ಕೂ ಬರುವ ಸಮಸ್ಯೆಗಳನ್ನೆಲ್ಲ ಅವಕಾಶಗಳಾಗಿ  ಪರಿವರ್ತಿಸಿಕೊಳ್ಳಬೇಕು. ಇಂದಿನ ದಿನ ಟೀಕಿಸಿದವರಿಗೆ ಮೀಸಲಾದರೆ, ನಾಳಿನ ದಿನವನ್ನು ಸಾಧಿಸಿ ತೋರಿಸುವ ವೇದಿಕೆಯಾಗಿ ರೂಪಿಸಿಕೊಳ್ಳಬೇಕು’...
ದೇಶಾವರಿ ನಗು, ಮಾತು ಎಲ್ಲ ಮುಗಿದ ಮೇಲೆ, ಆಕೆ ತನ್ನ ಆತ್ಮವೃತ್ತಾಂತಕ್ಕೆ ತೆರೆದುಕೊಳ್ಳುವ ಮೊದಲು ಓಂಕಾರದಂತೆ ಈ ನುಡಿಗಳನ್ನಾಡಿದರು.
ಆಕೆ ಆಡಿದ್ದೆಲ್ಲ ಸರಳ ಹಾಗೂ ಉತ್ಸಾಹಭರಿತ ಮಾತುಗಳು. ಆದರೆ ಅದರ ಹಿಂದೆ ಅಡಗಿದ್ದ ಅನುಭವದ ಹಾದಿ ಮತ್ತು ಆಕೆ ಅದನ್ನು ಸವೆಸಿದ ರೀತಿ ಮಾತ್ರ ನನ್ನನ್ನು ಚಕಿತ ಪಡಿಸಿದೆ..
ಹೀಗೆ ಮಾತಿಗೆ ಕೂತವರು ಬೇರಾರೂ ಅಲ್ಲ. ಮೌಂಟ್ಎವರೆಸ್ಟ್ಶಿಖರವೇರಿದ 26ರ ಹರೆಯದ  ವಿಶ್ವದ ಮೊದಲ ಅಂಗವಿಕಲ ಮಹಿಳೆ ಅರುಣಿಮಾ ಸಿನ್ಹಾ.
ನಮ್ಮ ಬದುಕಿಗೆ ನಾವೇ ಪ್ರೇರಕರು. ಅಂತರಾತ್ಮ ಜಾಗೃತಗೊಂಡರೆ ಮಾತ್ರ  ನಿಚ್ಚಳಗೊಂಡಿರುವ ಬದುಕಿನ ಗುರಿಯನ್ನು ಅನಾಯಾಸವಾಗಿ ತಲುಪಲು ಸಾಧ್ಯ. ಟೀಕಿಸಿದವರನ್ನು, ಜರಿದವರನ್ನು ತುಂಬು ಮನಸ್ಸಿನಿಂದ ಸ್ಮರಿಸಿಕೊಳ್ಳುತ್ತೇನೆ. ಅವರಾಡಿದ ಮಾತುಗಳಿಂದ ಛಲ ಪಡೆದು ಎವರೆಸ್ಟ್ಏರಿದ್ದೇನೆ ಎನ್ನುತ್ತ್ತಲೇ ತನ್ನ ಕತೆಯನ್ನು ಹೇಳಲು ಮುಂದಾದರು.
ದುರಂತಧ್ಯಾಯ:
ಯಾವ ಹಂತದಲ್ಲಿಯಾದರೂ ಬದುಕಿನಲ್ಲಿ ದುರಂತ ಧುತ್ತನೆ ಎದುರಾಗಬಹುದು. 2011 ಒಂದು ಮಧ್ಯರಾತ್ರಿ ಲಕ್ನೊದಿಂದ ದೆಹಲಿಗೆ ಸಂಚರಿಸುತ್ತಿದ್ದ ರೈಲಿನಲ್ಲಿ ಕಳ್ಳರು ನನ್ನ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕದಿಯಲು ಯತ್ನಿಸಿದರು. ವಿರೋಧಿಸಿದಾಗ, ರೈಲಿನಿಂದಲೇ ದೂಡಿದರು. ಪಕ್ಕದ ಹಳಿಗೆ ಬಿದ್ದ  ನನ್ನ ಮೇಲೆ ಮತ್ತೊಂದು ರೈಲು ಹರಿದು ಹೋಗಿತ್ತು. ನನ್ನ ಎಡಗಾಲು ಸಂಪೂರ್ಣ ಕಡಿದು ನನ್ನ ಕಣ್ಮುಂದೆ ಬಿದ್ದಿತ್ತು. ನನ್ನ ಪಾದಗಳನ್ನು ಹೆಗ್ಗಣಗಳು ತಿನ್ನಲು ಪ್ರಯತ್ನಿಸುತ್ತಿದ್ದವು. ಸುಮಾರು 7 ಗಂಟೆಗಳ ಕಾಲ ಹಾಗೇ ರೈಲು  ಹಳಿಯ ಮೇಲೆ ರಕ್ತದ ಮಡುವಿನಲ್ಲಿ ಬಿದ್ದುಕೊಂಡಿದ್ದೆ .
ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಅಲ್ಲಿ ಅನಸ್ತೇಷಿಯಾದ ಸೌಲಭ್ಯವಿರಲಿಲ್ಲ. ಜೀವನ್ಮರಣದ ಹೋರಾಟದಲ್ಲಿದ್ದ ನನಗೆ ಬದುಕುವುದು ಅಗತ್ಯವಾಗಿತ್ತು. ಹಾಗಾಗಿ ಅನಸ್ತೇಷಿಯಾವಿಲ್ಲದಿದ್ದರೂ, ಶಸ್ತ್ರಚಿಕಿತ್ಸೆ ನಡೆಸಿ ಎಂದು ವೈದ್ಯರಲ್ಲಿ ಮನವಿ ಮಾಡಿದ್ದೆ. ಏಳು ಗಂಟೆಗಳ ಕಾಲವೇ  ನೋವಲ್ಲಿದ್ದ ನನಗೆ ಪ್ರಜ್ಞಾವಸ್ಥೆಯಲ್ಲಿಯೇ ಶಸ್ತ್ರಚಿಕಿತ್ಸೆಯ ನೋವು ಭರಿಸುವುದು ಕಷ್ಟವೆನಿಸಲಿಲ್ಲ. ಆಸ್ಪತ್ರೆಯಲ್ಲಿ  ಚೇತರಿಸಿಕೊಳ್ಳುತ್ತಿರುವಾಗಲೇ ನನ್ನ ಬದುಕು ಸಂಪೂರ್ಣ ಮುಗಿಯಿತು ಎನ್ನುವ ನೋವು ತೀವ್ರವಾಗಿ ಕಾಡಿತು.
ಕಾಲೇಜು ದಿನಗಳಲ್ಲಿ ಉತ್ತಮ ಅಥ್ಲೀಟ್ ಆಗಿದ್ದ ನನಗೆ  ಕಾಲು ಕಳೆದುಕೊಂಡು ಕುಂಟಿಯಾಗುವ ದುರದೃಷ್ಟ ಎದುರಾಗಿತ್ತು. ಇದನ್ನೇ ಸವಾಲಾಗಿ ಸ್ವೀಕರಿಸುವ ದೃಢ ಮನಸ್ಸು ಬೆಳೆಯಿತು. ಮನಸ್ಸಿನ ಸಾಮುಗೆ ನೋವು ಉತ್ತಮ ಆಯ್ಕೆ.
ನನಗೆ ಮೂರು ವರ್ಷವಿರುವಾಗಲೇ ತಂದೆಯನ್ನು ಕಳೆದುಕೊಂಡೆ. ತಾಯಿಯ ಆಶ್ರಯದಲ್ಲಿಯೇ ಬೆಳೆದೆ. ಆಸ್ಪತ್ರೆಯಲ್ಲಿ ಸರಿಯಾಗಿ ನಿಲ್ಲಲು ಆಗದೇ ಕುಂಟುತ್ತಿದ್ದ ನನ್ನನ್ನು ಕಂಡು ಬಂಧು- ಬಾಂಧವರು ನಕ್ಕರು.  ಟಿಕೆಟ್ಪಡೆಯದೇ ಇದ್ದುದ್ದರಿಂದ ರೈಲಿನಿಂದ ಹಾರಿಕೊಂಡಳು, ಇದು ಆತ್ಮಹತ್ಯೆಯ ಪ್ರಯತ್ನ ಎಂಬ ಉಹಾಪೋಹಗಳನ್ನು ಹುಟ್ಟಿಸಿದರು. ಇಂತಹ ನೂರಾರು ಕಟುನುಡಿಗಳು, ವ್ಯಂಗ್ಯದ ಮಾತುಗಳು ನನ್ನನ್ನು ಮತ್ತಷ್ಟು ಧೀರಳನ್ನಾಗಿಯೇ ಮಾಡಿತು.
ಏನಾದರೂ ಆಗಲಿ. ಕಾಲಿಲ್ಲದ ಕುಂಟಿಯೊಬ್ಬಳು ಜೀವನದಲ್ಲಿ ಬಹುದೊಡ್ಡ ಸವಾಲನ್ನು ಸ್ವೀಕರಿಸಬೇಕು. ಅದು ಇತರರಿಗೆ ಸ್ಫೂರ್ತಿಯಾಗಬೇಕು ಎಂಬ ಆಲೋಚನೆ ಬಂತು. ಅದಕ್ಕಾಗಿ ಅತಿ ಎತ್ತರದ ಮೌಂಟ್ ಎವರೆಸ್ಟ್ ಶಿಖರವನ್ನು ಏರುವ ಸಾಹಸಕ್ಕೆ ಮುಂದಾದೆ. ಇದೇ ನನ್ನ ಗುರಿ ಎಂದು ಸ್ವಯಂ ಘೋಷಿಸಿಕೊಂಡೆ. ಸರಿಯಾಗಿ ನಡೆಯಲು ಆಗದವರು ಎವರೆಸ್ಟ್ ಏರುವುದೇ? ಎಂದು ಕೆಲವರು ನಕ್ಕರು. ಕೆಲವರೂ ತಲೆಗೂ ಪೆಟ್ಟುಬಿದ್ದಿರಬೇಕು ಎಂದು ಕುಹಕವಾಡಿದರು.
ಆಸ್ಪತ್ರೆಯಲ್ಲಿದ್ದುಕೊಂಡೇ ಮೌಂಟ್ ಎವರೆಸ್ಟ್ಏರಿದ ಮೊದಲ ಮಹಿಳೆ ಬಚೇಂದ್ರಿ ಪಾಲ್ ಅವರನ್ನು ಸಂಪರ್ಕಿಸಿ, ಅವರಿಂದ ತರಬೇತಿ ಪಡೆಯಲು ಅನುಮತಿಯನ್ನು ಪಡೆದೆ. ಕೃತಕ ಕಾಲು ಹಾಕಿಕೊಂಡು ಎವರೆಸ್ಟ್ ಏರಿದೆ.
ಎವರೆಸ್ಟ್ಏರಿದ ದಿನಗಳು
ಶಿಖರ ಏರುತ್ತಿದ್ದಂತೆ ಜತೆಗಿದ್ದ ಪರ್ವತಾರೋಹಿಗಳು ಹಿಂದೆ ಸರಿದರು. ಮೇಲಕ್ಕೆ ಹೋಗುತ್ತಿದ್ದಂತೆ ಚಳಿಯ ಪ್ರಖರತೆ ಇನ್ನಷ್ಟು ಹೆಚ್ಚುಗೊಂಡಿತು.  ಎತ್ತ ನೋಡಿದರೂ, ಮಂಜು ಹಾಗೂ ಹೆಣದ ರಾಶಿಯೇ ಕಂಡುಬರುತ್ತಿತ್ತು. ನನ್ನ ಜತೆ ನಾಲ್ಕು ಮಂದಿ ಶೆರ್ಪಾಗಳಿದ್ದರು. ಅವರೂ ಕೂಡ ಹಿಂದೆ ಸರಿದರು.  ಮೇಲಕ್ಕೆ ಹೋದಂತೆ ಕಾಲುಗಳು ಜಾರಲು ಆರಂಭಿಸಿದವು.  ಬೇಸ್ಕ್ಯಾಂಪ್ನಿಯಮಗಳನ್ನು ಶಿಸ್ತಿನಿಂದ ಪಾಲಿಸಿದೆ. ಹಾಗಾಗಿ ನಾನು ಯಶಸ್ವಿ ಪರ್ವತಾರೋಹಿಯಾಗಲು ಸಾಧ್ಯವಾಯಿತು.
ಶಿಖರದಲ್ಲೂ ಸಾವಿನ ವಲಯವಿತ್ತುಇದೇ ಹಂತದಲ್ಲಿ ಆಮ್ಲಜನಕ ಪೂರೈಕೆಯ ಬಾಟಲಿಯೂ ಖಾಲಿಯಾಗುವ ಹಂತಕ್ಕೆ ಬಂದಿತ್ತು. ದೂರದಲ್ಲಿ ಒಬ್ಬ ಬಾಂಗ್ಲದೇಶಿ ಪರ್ವತಾರೋಹಿ ಸಾಯುವುದನ್ನ ಕಣ್ಣಾರೆ ಕಂಡೆ. ಶೆರ್ಪಾಗಳು ವಾಪಸ್ಸು ಹೋಗೋಣವೆಂದರೂ. ಹಳಿಗಳ ಮೇಲೆ 7 ಗಂಟೆಗಳ ರಕ್ತದ ಮಡುವಿನಲ್ಲಿ ಬಿದ್ದಾಗಲೇ ಸಾವು ನನ್ನ ಹತ್ತಿರ ಸುಳಿಯಲಿಲ್ಲ. ಈಗ ಸಾಯವುದಿಲ್ಲ. ಹೇಗಾದರೂ ಮಾಡಿ ಶಿಖರವೇರುವ ದೃಢನಿಶ್ಚಯ ಜತೆಗಿತ್ತು.  ಶಿಖರವೇರಿ ರಾಷ್ಟ್ರದ ಧ್ವಜ ನೆಟ್ಟ ಸಂದರ್ಭ ಬದುಕಿನ ಅವಿಸ್ಮರಣೀಯ ಗಳಿಗೆಯಲ್ಲ ಒಂದು.
ಸಂದರ್ಭದಲ್ಲಿ ರೈಲಿನಿಂದ ದೂಡಿದ ದುಷ್ಕರ್ಮಿಗಳನ್ನು ನೆನಪಿಸಿಕೊಂಡೆ. ಅವರ ದುಷ್ಕೃತ್ಯದಿಂದ ಬದುಕು ವಿಭಿನ್ನ ಹಾದಿಗೆ ಹೋಯಿತ್ತು. ಅವರಿಗೂ ಒಳ್ಳೆಯ ಕೆಲಸ ಮಾಡುವಂತೆ ಪ್ರೇರಣೆ ನೀಡು ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ. ದುಷ್ಕೃತ ಜರುಗದಿದ್ದರೆ, ಬಹುಶಃ ನಾನು ಪರ್ವತಾರೋಹಿಯಾಗುತ್ತಿರಲಿಲ್ಲ. ಜನರ ಪ್ರೀತಿ ಗಳಿಸಲು ಸಾಧ್ಯವಾಗುತ್ತಿರಲಿಲ್ಲ.
ಯುವ ಜನರು ಗುರಿಯನ್ನು ದೃಢನಿಶ್ಚಯ ಮಾಡಿಕೊಳ್ಳಬೇಕು. ಅದರೆಡೆಗೆ ಗಮನವನ್ನು ಕೇಂದ್ರೀಕರಿಸಬೇಕು. ಜೀವಿಸುವ ಛಲವಿದ್ದವರಿಗೆ ಮಾತ್ರ ಅದೃಷ್ಟ ಬೆಂಬಲ ನೀಡುತ್ತದೆ. ಸವಾಲಿಗೆ ಎದೆಯೊಡ್ಡಿಕೊಳ್ಳದಿರುವುದೇ ದೊಡ್ಡ ಅಪಾಯ. ಬದುಕಿನಲ್ಲಿ ಸಂಘರ್ಷವಿದ್ದಾಗಷ್ಟೇ ಏನಾನ್ನದರೂ ಸಾಧಿಸಲು ಸಾಧ್ಯ. ನನಗೆ ಸ್ವಾಮಿ ವಿವೇಕಾನಂದ ನುಡಿಗಳೇ ಸ್ಫೂರ್ತಿ.
ಸದ್ಯ  ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ  ಅಜಾದ್ ಅವರ ಹೆಸರಿನಲ್ಲಿ ವಿಕಲಾಂಗ ಖೇಲ್ ಅಕಾಡೆಮಿಯ ನಿರ್ಮಾಣಕ್ಕೆ ಮುಂದಾಗಿದ್ದೇನೆ. ಮೇ 21ರಂದು ಶಿಲಾನ್ಯಾಸ ಕೂಡ ನಡೆಯಲಿದೆ. ಇಪ್ಪತ್ತು ಎಕರೆ ಭೂ ಪ್ರದೇಶದಲ್ಲಿ, ಅಥ್ಲೀಟ್ಟ್ರ್ಯಾಕ್, ಒಳಾಂಗಣ ಕ್ರೀಡಾಂಗಣ ಸೇರಿದಂತೆ ಸುಸಜ್ಜಿತ ವ್ಯವಸ್ಥೆಯಿರುವ ಅಕಾಡೆಮಿ ಇದಾಗಲಿದ್ದು, ಅಂಗವಿಕಲ ಮಕ್ಕಳ ಕ್ರೀಡಾಸಕ್ತಿಯನ್ನು ಪೋಷಿಸುವ ದಿಸೆಯಲ್ಲಿ ಅಕಾಡೆಮಿ ಕಾರ್ಯನಿರ್ವಹಿಸಲಿದೆ.
ಸುಮಾರು ₨25 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಅಕಾಡೆಮಿಯಲ್ಲಿ  ಮಕ್ಕಳಿಗೆ ಶಿಕ್ಷಣ, ಸಾಹಸ ಹಾಗೂ ಆತ್ಮವಿಶ್ವಾಸವನ್ನು ತುಂಬುವ ಕೆಲಸ ಮಾಡಲು ಮುಂದಾಗಿದ್ದೇನೆ.  ಈಗಾಗಲೇ ಅಕಾಡೆಮಿಯ ಸ್ಥಾಪನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ನೆರವು ನೀಡುವ ಭರವಸೆ ನೀಡಿದ್ದಾರೆ.  ಕ್ರೀಡಾ ಸಚಿವರ ಸಹಾಯವನ್ನು ಕೂಡ ಅಪೇಕ್ಷಿಸಲಾಗಿದೆ. ಜೈಪುರ ಕೃತಕ ಕಾಲು ಜೋಡಣೆ ಕಂಪೆನಿಯ ಕೃತಕ ಕಾಲುಗಳ ಗುಣಮಟ್ಟ ವಿಕಲಾಂಗ ಕ್ರೀಡಾಳುಗಳ ಸಾಮರ್ಥ್ಯಕ್ಕೆ ಸರಿಹೊಂದುವುದಿಲ್ಲ. ಹಾಗಾಗಿ ಅಕಾಡೆಮಿಯಲ್ಲಿ ಕೃತಕ ಕಾಲು ಜೋಡಣೆಗೆ ಸಂಬಂಧಪಟ್ಟ ಸಂಶೋಧನಾ ಕೇಂದ್ರವನ್ನು ತೆರೆಯುವ ಉದ್ದೇಶವೂ ಇದೆ
ಆಕೆ ಒಂದೇ ಉಸಿರನಲ್ಲಿ ತನ್ನ ಕತೆಯನ್ನು ಅರುಹಿದರು. ಅವರ ಒಂದೊಂದು ಮಾತು ಆತ್ಮಬಲವನ್ನು ಹೆಚ್ಚಿಸುವಂತದ್ದೆ. ಅರುಣಿಮಾರಂತಹ ನೂರಾರು ಸಾಧಕಿಯರು ಈ ನೆಲದ ಬನಿಯಾಗಿ ಉಳಿದಿದ್ದಾರೆ. ಸಾಹಸ, ಕ್ರೀಡಾ ಚಟುವಟಿಕೆಗಳು ದೈಹಿಕವಷ್ಟೇ ಅಲ್ಲ ಮಾನಸಿಕವಾಗಿಯೂ ಹೆಣ್ಣನ್ನು ಸದೃಢಗೊಳಿಸುತ್ತದೆ.
ಎಲ್ಲಿಯದೋ ಮಾಮರ, ಎಲ್ಲಿಯದೋ ಕೋಗಿಲೆ:
ಕ್ರೀಡೆ ಹೆಣ್ಣಿನ ಕೋಮಲತನವನ್ನು ಹಾಳುಗೆಡವುತ್ತದೆ. ಹಾರಿದರೆ, ಜಿಗಿದರೆ ಎಲ್ಲಿ ಮನೆಯ ಮಗಳು ಗಂಡುಬೀರಿ ಪಟ್ಟ ಗಿಟ್ಟಿಸಿಕೊಂಡು ಬಿಡುತ್ತಾಳೋ ಎಂದು ಆತಂಕ ಪಡುವ ಪೋಷಕರು,  ಏರುದನಿಯಲ್ಲಿ ಮಾತನಾಡಿ, ಸಂವೇದನೆ ವ್ಯಕ್ತಪಡಿಸಿದಾಕ್ಷಣ ಸ್ತ್ರೀವಾದಿಯೇ ಇರಬೇಕು ಎಂದು ಗುಮಾನಿಸುವವರು, ಹೆಣ್ಣೆಂದರೆ ಬರೀ ಭಾವುಕ ಎಂದು ನಿರ್ಭಾವುಕರಾಗಿ ತೀರ್ಪು ನೀಡುವವರು ಅರುಣಿಮಾಳನ್ನು ಮತ್ತೊಮ್ಮೆ ಕಣ್ಬಿಟ್ಟು ನೋಡಬೇಕು.
 ಬೇಜವಾಬ್ದಾರಿ ಗಂಡನೊಂದಿಗೆ ಏಗಲು ಆಗುತ್ತಿಲ್ಲ. ಕೌಟುಂಬಿಕ, ಸಾಮಾಜಿಕ, ಆರ್ಥಿಕ ಸಮಸ್ಯೆಗಳಿಂದ ಬೆಂಡಾಗಿದ್ದೇನೆ. ಆರ್ಥಿಕ ಹಾಗೂ ಔದ್ಯೋಗಿಕವಾಗಿ ಗಂಡಿಗೆ ಸರಿಸಮಾನಾಗಿ ದುಡಿಯುತ್ತಿದ್ದರೂ ತಾರತಮ್ಯ ಎಂದು ಕೊರಗುವವರಿಗೂ ಅರುಣಿಮಾಳ ದಿಟ್ಟತನದ ಬದುಕು ದೊಡ್ಡ ವಿಶ್ವಾಸ ತುಂಬಿಕೊಡಬಲ್ಲದು. ಸಮಾಜದ ಹಲವು ಕ್ರೌರ್ಯಗಳಿಗೆ ಬಲಿಯಾಗಿಯೂ ಸಾಧಿಸಬೇಕೆಂಬ ಛಲವುಳ್ಳವರು ಕೂಡ ಅರುಣಿಮಾಳ ಹಾದಿಯನ್ನು ತೆರೆದ ಮನಸ್ಸಿನಿಂದ ನೋಡಬಹುದು.  ಅಂಗವೈಕಲ್ಯವನ್ನು ಮೀರಿ ಮಾಡಿದ ಅರುಣಿಮಾಳ ಸಾಧನೆಯಿಂದ, ವೈಕಲ್ಯ ಮನಸ್ಸಿಗೆ ಸಂಬಂಧಿಸಿದ್ದೇ ಹೊರತು ದೇಹಕ್ಕಲ್ಲ ಎಂಬ ವಿವೇಕವನ್ನು ಇತರರಲ್ಲಿ ಹೆಜ್ಜೆ ಹೆಜ್ಜೆಗೂ ನೆನಪಿಸಿಕೊಟ್ಟರೆ ಅದುವೇ ಸಾರ್ಥಕ್ಯ.
ಸದ್ಯ ಹೆಣ್ಣು ತನಗೆ ಅರಿವಿಲ್ಲದಂತೇ ಹೇರಿರುವ  “ಮೌಲಿಕಹೊರೆಯನ್ನು ಇಳಿಸಿಕೊಳ್ಳಬೇಕು. ಹೆಣ್ಣೆಂಬುದು ಆತ್ಮದ ಅಂತರ್ದೃಷ್ಟಿಯೆಂಬುದನ್ನು ಅವಿದ್ಯಾವಂತರಿಗಿಂತ, ವಿದ್ಯಾವಂತರಲ್ಲಿಯೇ ಹೆಚ್ಚಾಗಿ ಬೆಳೆಸಬೇಕಿದೆ. ಅತ್ಯಾಚಾರ, ಅನ್ಯಾಯಕ್ಕೆ ಒಳಗಾದವಳು ಒಂದೋ ಸಾಯಬೇಕು. ಇಲ್ಲ, ಸಮಾಜದ ಕಾರುಣ್ಯದೊಳಗೆ ಆತ್ಮವಿಲ್ಲದವಳಾಗಿ ಬದುಕಬೇಕು ಎಂದು ಬಯಸುವ ಸಮಾಜದೆಡೆಗೆ, ಸವಾಲನ್ನು
ಸ್ವೀಕರಿಸುವ, ಅದನ್ನು ಯಶಸ್ವಿಯಾಗಿ ನಿರ್ವಹಿಸುವ ಛಾತಿಯನ್ನು ನಮ್ಮ ಕುಡಿಗಳಲ್ಲಿ ಒಡಮೂಡಿಸಬೇಕಿದೆ. ಇದಕ್ಕೆ ಎಲ್ಲ ಹೆಂಗರಳು  ಒಗ್ಗೂಡಬೇಕಿದೆ.